ಚಾಮರಾಜನಗರ: ಮೈಸೂರು ನಗರ, ದಸರಾ ವೈಭವ, ಭರ್ಜರಿ ಊಟ, ಆತಿಥ್ಯ ಎಲ್ಲವೂ ಕೊರೊನಾ ಕಾರಣದಿಂದ ಈ ಬಾರಿ ತಪ್ಪಿ ಹೋಗಿದೆ. ಜೀವನದ ದೊಡ್ಡ ಅನುಭವವೊಂದು ದೊರಕದಂತಾಯಿತು ಎಂದು ದಸರಾದಲ್ಲಿ ಭಾಗಿಯಾಗದ ಮಾವುತರು, ಕಾವಾಡಿಗಳು ಬೇಸರ ಹೊರಹಾಕಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಐನೋರು ಮಾರಿಗುಡಿ ವಲಯದ ರಾಂಪುರ ಆನೆ ಶಿಬಿರದಲ್ಲಿರುವ ಜಯಪ್ರಕಾಶ್, ಚೈತ್ರಾ, ಲಕ್ಷ್ಮೀ ಆನೆಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬಗಳು ವಿಶ್ವವಿಖ್ಯಾತ ದಸರಾಕ್ಕೆ ಹೋಗಲಾಗದೆ ಮೈಸೂರು ಭೇಟಿಯ ನೆನಪುಗಳನ್ನು ಮೆಲುಕು ಹಾಕುತ್ತಾ ತೃಪ್ತಿ ಪಡುತ್ತಿದ್ದಾರೆ.
ಕೊರೊನಾ ಭೀತಿಯಿಂದಾಗಿ ಅರಮನೆ ಆವರಣದಲ್ಲಿ ಈ ಬಾರಿ 5 ಆನೆಗಳ ಮೂಲಕ ಸಾಂಪ್ರದಾಯಿಕ ದಸರಾ ನಡೆಯಲಿರುವುದರಿಂದ ಉಳಿದ ಮಾವುತರು, ಕಾವಾಡಿಗಳು ದಸರೆಗೆ ತೆರಳಲಿಲ್ಲ. ದಸರಾದ ಜಂಬುಸವಾರಿಯಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತ ತೆರಳುತ್ತಿದ್ದ ಮಾವುತ ಹಾಗೂ ಕಾವಾಡಿಗರ ಕುಟುಂಬಗಳು ಎರಡು ತಿಂಗಳು ಮೈಸೂರು ನಗರದಲ್ಲೇ ವಾಸ್ತವ್ಯ ಹೂಡಿ ಅಲಂಕೃತ ಅರಮನೆ ಹಾಗೂ ಒಂದಷ್ಟು ಪ್ರವಾಸಿ ತಾಣಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು.
ಅರಮನೆ ಆವರಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ, ಅವರ ಮಕ್ಕಳಿಗೆ ಟೆಂಟ್ ಶಾಲಾ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿತ್ತು. ಈ ಅವಧಿಯಲ್ಲಿ ಅವರ ಸಮಸ್ಯೆಗಳಿಗೆ ಒಂದಷ್ಟು ಪರಿಹಾರವೂ ಸಿಗುತ್ತಿತ್ತು. ಅಲ್ಲದೇ ಬರುವಾಗ ಅದ್ದೂರಿ ಸ್ವಾಗತ, ಕಾಡಿಗೆ ಮರಳುವಾಗ ಅತಿಥಿ ಸತ್ಕಾರದ ಬೀಳ್ಕೊಡುಗೆ ಸಿಗುತ್ತಿತ್ತು. ಆದರೆ ಈ ಬಾರಿ ಅದಾವುದಕ್ಕೂ ಅವಕಾಶವಿಲ್ಲದಂತಾಗಿದೆ. ಇದರಿಂದ ನಿರಾಶೆಗೊಳಗಾಗಿರುವ ಇವರು ಮುಂದಿನ ಬಾರಿಯಾದರೂ ದಸರಾ ದರ್ಶನ ಭಾಗ್ಯ ಸಿಗಬಹುದೆಂದು ಆಶಾಭಾವನೆ ಇಟ್ಟುಕೊಂಡಿದ್ದಾರೆ.
ದಸರಾಗೆ ಬರುತ್ತಿದ್ದ ಆನೆಗಳಷ್ಟೇ ಅಲ್ಲ, ಅವುಗಳ ಮಾವುತರು ಹಾಗೂ ಅವರ ಕುಟುಂಬಗಳಿಗೆ ವಿಶೇಷ ಆತಿಥ್ಯ ದೊರಕುತ್ತಿತ್ತು. ಭೂರಿ ಭೋಜನದ ವ್ಯವಸ್ಥೆಯೂ ಆಗುತ್ತಿತ್ತು. ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಭೋಜನ ಮಾಡುವ ಅವಕಾಶವೂ ಸಿಗುತ್ತಿತ್ತು. ಈ ವೇಳೆ ಕೈಗೆ ಒಂದಷ್ಟು ಹಣ, ತೊಡಲು ಬಟ್ಟೆ ಸೇರಿದಂತೆ ಹಲವು ಸೌಲಭ್ಯಗಳು ದೊರಕುತ್ತಿದ್ದವು. ಮಾವುತರ ಆಸೆ–ಆಕಾಂಕ್ಷೆಗಳಿಗೆ ಕೊರೊನಾ ಮಹಾಮಾರಿ ತಣ್ಣೀರೆರಚಿದೆ.