ಚಾಮರಾಜನಗರ: ಕೊಳ್ಳೇಗಾಲ ಸಮೀಪದ ಸರಗೂರು ಕೆರೆಯಲ್ಲಿ ಹಕ್ಕಿಗಳ ಕಲರವ ಪ್ರತಿದಿನವೂ ಕೇಳಿ ಬರುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಜನ ಬಿಳಿ ಬಟ್ಟೆ ಹೊದ್ದು ನಿಂತಂತೆ ಮರಗಳ ಮೇಲೆ ಕುಳಿತ ವಿವಿಧ ಜಾತಿಯ ಪಕ್ಷಿಗಳನ್ನು ಕಂಡು ಮನಸೋತಿದ್ದಾರೆ. ಅಲ್ಲದೆ ಛಾಯಾಗ್ರಹಕರಿಗಂತೂ ಇದು ಫೇವರೆಟ್ ಪ್ಲೇಸ್ ಆಗಿದೆ.
ಸ್ಥಳೀಯ ಹಾಗೂ ರಷ್ಯಾ ಸೇರಿದಂತೆ ಇತರೇ ದೇಶಗಳಿಂದ ಬರುವ ಅಪರೂಪದ ಪಕ್ಷಿಗಳಾದ ಬುಲ್ ಫಿಂಚ್, ಕ್ರಾಸ್ ಬಿಲ್, ನಥಾಟ್ಚಸ್ ಹಾಗೂ ವ್ಯಾಕ್ಸ್ವಿಂಗ್, ಬಾರ್ ಹೆಡೆಡ್ ಗೀರ್ಸ್, ಪೆಲಿಕನ್, ಐಬಿಸರ್ಸ್ಗಳಂತಹ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಕೆಲವು ಪಕ್ಷಿ ಪ್ರಬೇಧ ಗೂಡುಕಟ್ಟಿ ಆಹಾರಕ್ಕಾಗಿ ಮೀನುಗಳನ್ನು ಅರಸಿ ಈ ಕೆರೆಯತ್ತ ಬಂದರೆ ಕೆಲವು ಜಾತಿಯವು ಸಂತಾನೋತ್ಪತ್ತಿಗಾಗಿ ಬರುತ್ತವೆ. ಸುತ್ತಲೂ ಭತ್ತದ ಗದ್ದೆಗಳಿರುವುದರಿಂದ ಇತರೆ ಹುಳ-ಹುಪ್ಪಟೆಗಳನ್ನು ತಿನ್ನುವ ಪಕ್ಷಿಗಳು ಈ ಕೆರೆ ಸುತ್ತ ಲಂಗರು ಹಾಕಿವೆ.
ಪಕ್ಷಿ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ: 'ಈಟಿವಿ ಭಾರತ'ಕ್ಕೆ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ಪ್ರತಿಕ್ರಿಯಿಸಿ, ವಲಸೆ ಬರುವ ಪಕ್ಷಿಗಳು ಇಲ್ಲಿಯೇ ಉಳಿಯುವಂತೆ ಮಾಡಲು ಕೆರೆಯ ಸುತ್ತಲೂ ಆಲ, ಜಾಲಿ ಮತ್ತು ಹುಣಸೆ ಗಿಡಗಳನ್ನು ಹಾಕಲು ಯೋಜನೆ ಹಾಕಿಕೊಂಡಿದ್ದೇವೆ. ಜೊತೆಗೆ, ಅಕೇಶಿಯಾ ಮರಗಳ ಸಹಾಯದಿಂದ ಸಣ್ಣ ಸಣ್ಣ ದ್ವೀಪಗಳಂತೆ ಮಾಡಿ ಪಕ್ಷಿಗಳ ಕೆರೆಯಲ್ಲೇ ಉಳಿಯುವ ವಾತಾವರಣ ನಿರ್ಮಿಸಲು ರೂಪುರೇಷೆ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.