ಚಾಮರಾಜನಗರ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ, ಕ್ಲಬ್ ನಡೆಸುತ್ತಿದ್ದ ತಹಶೀಲ್ದಾರ್ ಚಾಲಕ ಸೇರಿದಂತೆ 20 ಮಂದಿಯನ್ನು ಬಂಧಿಸಿರುವ ಘಟನೆ ನಗರದ ಕರಿನಂಜಪುರ ಬಳಿ ನಡೆದಿದೆ.
ಮೀಸಲು ಪಡೆಯ ಎಎಸ್ಐ ಪ್ರದೀಪ್, ಹೆಡ್ಕಾನ್ಸ್ಟೇಬಲ್ ಮರಿಸ್ವಾಮಿ, ಚಾಮರಾಜನಗರ ತಹಶೀಲ್ದಾರ್ ಅವರ ಚಾಲಕ ಕಮಲೇಶ್ ಸೇರಿದಂತೆ 20 ಮಂದಿಯನ್ನು ಜಿಲ್ಲಾ ಪೊಲೀಸ್ ವಿಶೇಷ ತಂಡ ಬಂಧಿಸಿ ಪಣಕ್ಕಿಟ್ಟಿದ್ದ 29 ಸಾವಿರ ರೂ.ವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸ.. ಶ್ವಾನಗಳ ದಾಳಿಗೆ ಬಾಲಕಿ ಬಲಿ
7 ಮಂದಿ ಭಕ್ತರ ಬಂಧನ:
ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜೂಜಾಡುತ್ತಿದ್ದ 7 ಮಂದಿ ಭಕ್ತರನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ತಲಕಾಡು ಗ್ರಾಮದ ಶಿವಾನಂದಸ್ವಾಮಿ, ನಾಗೇಂದ್ರ ಕುಮಾರ್, ವಿಜಯ್', ಮಹದೇವಪ್ಪ, ಬಸವರಾಜು ಕೃಷ್ಣ, ಸಂತೋಷ್ ಕುಮಾರ್ ಬಂಧಿತರು.
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಸ್ಮಾರಕ ಭವನದ ಹಿಂಭಾಗ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ದಾಳಿ ನಡೆಸಿ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿ ಪಣಕ್ಕಿಟ್ಟಿದ್ದ 26,750ರೂ ಗಳನ್ನು ವಶಕ್ಕೆ ಪಡೆದಿದ್ದಾರೆ.