ಚಾಮರಾಜನಗರ: ಕಾದಾಟದಲ್ಲಿ ಬಾಲ ಕಳೆದುಕೊಂಡ ಸಲಗದ ಮೇಲೆ ಅರಣ್ಯ ಇಲಾಖೆ ನಿಗಾ ಇಟ್ಟಿರುವ ಘಟನೆ ಕಾವೇರಿ ವನ್ಯಜೀವಿಧಾಮದ ಸಂಗಮ ವಲಯದಲ್ಲಿ ನಡೆದಿದೆ.
ಕಾಡಾನೆಗಳ ಕಾದಾಟದಲ್ಲಿ ಬಾಲ ಕಳೆದುಕೊಂಡು ಗಾಯಗೊಂಡಿರುವ ಸಲಗವೊಂದು ಗಾಯದ ನೋವು ತಾಳಲಾರದೇ ಹಾಗೂ ನೊಣದಿಂದ ರಕ್ಷಿಸಿಕೊಳ್ಳಲು ನೀರಿನಲ್ಲಿ ನಿಂತಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದಿದೆ.
ಈ ಕುರಿತು ಸಿಸಿಎಫ್ ಮನೋಜ್ ಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‌ಮಿಶ್ರ ಅವರ ಸೂಚನೆಯ ಮೇರೆಗೆ ಸಲಗಕ್ಕೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮತ್ತಿಗೂಡ ಅರಣ್ಯದಿಂದ ಅಭಿಮನ್ಯು ಹಾಗೂ ಕೃಷ್ಣ ಎಂಬ ಎರಡು ಕುಮ್ಕಿ ಆನೆ ಹಾಗೂ ಬನ್ನೇರುಘಟ್ಟದಿಂದ ವೈದ್ಯ ಡಾ. ಉಮಾಶಂಕರ್ ಅವರನ್ನು ಕರೆಸಲಾಗಿದೆ.
ಎರಡು ದಿನಗಳ ಕಾಲ ಸಲಗದ ಮೇಲೆ ನಿಗಾವಹಿಸಲಾಗುವುದು. ಗಾಯವು ಮಾಸದಿದ್ದರೆ ಸಾಕಾನೆಗಳ ಸಹಾಯ ಪಡೆದು ಚಿಕಿತ್ಸೆ ನೀಡಲಾಗುವುದು. ಸದ್ಯ ಅದು ನೀರಿನಿಂದ ಮೇಲೆ ಓಡಾಡಿಕೊಂಡಿದೆ ಎಂದು ತಿಳಿದುಬಂದಿದೆ.