ಮೈಸೂರು/ಚಾಮರಾಜನಗರ: ಚುನಾವಣೆಗೆ ಇನ್ನು 8 ದಿನಗಳು ಮಾತ್ರ ಬಾಕಿ ಇರುವುದರಿಂದ ಇಂದು ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿ ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಿದರು. ಯಡಿಯೂರಪ್ಪ ಸೋಮಣ್ಣ ಅವರ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂಬ ಮಾತಿನ ನಡುವೆ, ಇಂದು ಅಮಿತ್ ಶಾ ಜೊತೆ ಪ್ರಚಾರಕ್ಕೆ ಯಡಿಯೂರಪ್ಪ ಆಗಮಿಸಿದ್ದರು.
ಈ ವೇಳೆ ಅಮಿತ್ ಶಾ ಮಾತನಾಡಿ, ಇದೊಂದು ಮಹತ್ವದ ಚುನಾವಣೆ, ವರುಣ ರಾಜ್ಯದ ಚುನಾವಣೆಯಲ್ಲಿ ಅತ್ಯಂತ ಪ್ರಮುಖವಾಗಿದೆ. ಸೋಮಣ್ಣನವರನ್ನ ಗೆಲ್ಲಿಸಿದರೆ ಮುಂದೆ ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ. ಕರ್ನಾಟಕ ಸುರಕ್ಷಿತವಾಗಿ ಹಾಗೂ ಸಮೃದ್ಧವಾಗಿ ಇರಬೇಕಾದರೆ ಅದು ಮೋದಿಯವರಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಗೆದ್ದು ಕಳೆದ ಬಾರಿ ಹೈಕಮಾಂಡ್ಗೆ ಎಟಿಎಂ ಆಗಿತ್ತು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಫ್ಐ ಬ್ಯಾನ್ ಮಾಡಿರುವುದನ್ನು ವಾಪಸ್ ಪಡೆಯುತ್ತದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಪ್ರತಿ ಬಾರಿ ಕ್ಷೇತ್ರವನ್ನು ಹುಡುಕುತ್ತಾರೆ. ಏಕೆಂದರೆ ಗೆದ್ದ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಿಲ್ಲ, ಅದಕ್ಕೆ ಅವರನ್ನು ಜನ ಓಡಿಸುತ್ತಾರೆ. ನಿವೃತ್ತಿ ಆಗುವ ನಾಯಕ ನಿಮಗೆ ಬೇಕಾ. ಲಿಂಗಾಯತ ಸಮಾಜವನ್ನು ಭ್ರಷ್ಟಾಚಾರಿ ಎಂದು ಹೇಳುವ ಮೂಲಕ ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತರ ಮೀಸಲಾತಿ ವಾಪಸ್ ಪಡೆಯುತ್ತಾರೆ ಎಂದರು.
ಸಿದ್ದರಾಮಯ್ಯ ನರೇಂದ್ರ ಮೋದಿಯವರ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡಿದ್ದರು, ಅವರಿಗೆ ಏಕೆ ಮತ ಹಾಕಬೇಕು. ಅದನ್ನು ಬಿಟ್ಟು ವರುಣದಲ್ಲಿ ಸೋಮಣ್ಣನವರನ್ನ ಗೆಲ್ಲಿಸಿದರೆ, ರಾಜ್ಯದಲ್ಲಿ ವರುಣಾವನ್ನ ಮಾದರಿಯಾಗಿ ಮಾಡುತ್ತೇವೆ. ಆ ಮೂಲಕ ಮತ್ತೇ ನರೇಂದ್ರ ಮೋದಿಯವರು 2024ಕ್ಕೆ ಪ್ರಧಾನಿ ಮಾಡಲು ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಮನವಿ ಮಾಡಿದರು. ಯಡಿಯೂರಪ್ಪ ಮಾತನಾಡಿ, ಭಾವಿ ಶಾಸಕ ಸೋಮಣ್ಣ ಅವರೇ, ವರುಣದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಆಶೀರ್ವಾದ ನಿಮ್ಮ ಮೇಲಿದೆ. ಅಭ್ಯರ್ಥಿ ವಿ.ಸೋಮಣ್ಣ ಜನಪ್ರಿಯ ವ್ಯಕ್ತಿ, ನೂರಕ್ಕೆ ನೂರು ರಷ್ಟು 20 ರಿಂದ 25 ಸಾವಿರ ಲೀಡ್ನಲ್ಲಿ ವರುಣದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದಷ್ಟು ಕಮಲ ಹೆಚ್ಚು ಅರಳುತ್ತದೆ - ಅಮಿತ್ ಶಾ: ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಪ್ರಚಾರ ಸಭೆಯಲ್ಲಿ ಅಮಿತ್ ಶಾ ಭಾಗವಹಿಸಿ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ನವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದಷ್ಟು ಕಮಲ ಹೆಚ್ಚು ಅರಳುತ್ತದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ, ಮನೆ ಕೊಟ್ಟ, ಅಕ್ಕಿ ನೀಡಿದ, ಶೌಚಾಲಯ ಕೊಟ್ಟ, ಭಾರತವನ್ನು ಅಭಿವೃದ್ಧಿಗೊಳಿಸುತ್ತಿರುವ ಮೋದಿ ವಿಷ ಸರ್ಪವೇ.? ನೀವು ಪ್ರಧಾನಿ ಮೋದಿ ಅವರನ್ನು ಬೈದಷ್ಟು ಬಿಜೆಪಿಗೆ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ವಿಶ್ವಾಸ ಇಲ್ಲದ ಗ್ಯಾರಂಟಿಗಳನ್ನು ಕಾಂಗ್ರೆಸ್ ಕೊಡುತ್ತಿದೆ, ಕಾಂಗ್ರೆಸ್ ಕೊಡುತ್ತಿರುವ ಗ್ಯಾರಂಟಿ ಭ್ರಷ್ಟಾಚಾರದ ಗ್ಯಾರಂಟಿ, ಒಂದು ಸಮುದಾಯವನ್ನು ತುಷ್ಟೀಕರಣ ಮಾಡುವ ಗ್ಯಾರಂಟಿ, ಸಮಾಜದಲ್ಲಿ ಗಲಾಟೆ ಮಾಡುವ ಗ್ಯಾರಂಟಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ, ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೇ ಅದು ಅಭಿವೃದ್ಧಿಗೆ ರಿವರ್ಸ್ ಗೇರ್ ಇದ್ದಂತೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಸುರಕ್ಷಿತ ಕರ್ನಾಟಕ, ನಂ 1 ರಾಜ್ಯ ಕರ್ನಾಟಕ ಆಗಲಿದೆ, ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಕುಳಿತವರ ಎಟಿಎಂ ಆಗಲಿದೆ ಅಷ್ಟೇ ಎಂದು ಲೇವಡಿ ಮಾಡಿದರು.
ಬಿಜೆಪಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದೆ, ಪ.ಜಾತಿ, ಪ.ಪಂಗಡದ ಮೀಸಲಾತಿ ಹೆಚ್ಚಿಸಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಹಾಗಾದಾರೆ ಲಿಂಗಾಯತ, ಒಕ್ಕಲಿಗರ ಮೀಸಲಾತಿ ಕಡಿಮೆ ಆಗಲಿದೆ ಎಂದು ಕೈ ಪಡೆ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದರು.
ನಂತರ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಉಚಿತ ಹಾಲು, ಉಚಿತ ಸಿರಿಧಾನ್ಯ, ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಸೇವೆಯನ್ನು ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಜಾರಿ ಮಾಡುತ್ತೇವೆ. ಅಮಿತ್ ಶಾ ಬಂದಿರುವುದು ನಮಗೆ ಆನೆ ಬಲ ಬಂದಂತಾಗಿದ್ದು, ಈ ಬಾರಿ ರಾಜ್ಯದಲ್ಲಿ 125 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ, ಹನೂರಿನಲ್ಲಿ 20 ಸಾವಿರ ಮತಗಳ ಅಂತರದಿಂದ ಡಾ.ಪ್ರೀತನ್ ನಾಗಪ್ಪ ಗೆಲ್ಲುವ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಲಬುರಗಿಯಲ್ಲಿ ಪ್ರಧಾನಿ ದಂಡಯಾತ್ರೆ: ಖರ್ಗೆ ತವರಿನಲ್ಲಿ ಮೋದಿ ಮೋಡಿ