ಕೊಳ್ಳೇಗಾಲ: ಸಮೀಪದ ಕೌದಳ್ಳಿಯಲ್ಲಿ ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ಸೇರಿದ ಜಾಗದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಸಿಬ್ಬಂದಿ ಜೊತೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಮಲೆಮಹದೇಶ್ವರ ವನ್ಯಧಾಮದ ರಾಮಾಪುರ ವನ್ಯಜೀವಿ ವಲಯದ ಕೌದಳ್ಳಿ ವಸತಿ ಗೃಹದ ಸಮೀಪ ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾದ 94ಡಿ ಸರ್ವೆ ನಂಬರ್ ಜಾಗದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅಕ್ರಮ ಕಟ್ಟಡ ನಿರ್ಮಿಸುತ್ತಿರುವ ಮಾಹಿತಿ ಆಧರಿಸಿ ಸ್ಥಳಕ್ಕೆ ಬೇಟಿ ನೀಡಿದ ಡಿಸಿಎಫ್, ಇದು ಅರಣ್ಯ ಇಲಾಖೆಗೆ ಸೇರಿದ ಸ್ಥಳವಾಗಿದೆ. ಈ ಕೂಡಲೇ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ನಿಲ್ಲಿಸಿ ಎಂದು ಸೂಚಿಸಿದರು. ಆದರೆ, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್ ಅನುಮತಿ ಪಡೆದೇ ಕಟ್ಟಡ ನಿರ್ಮಾಣ
ಇದೇ ವೇಳೆ, ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ಸ್ಥಳೀಯ ಮುದಾಸಿರ್ ಎಂಬುವವರು ಕಾಮಗಾರಿ ನಡೆಯುತ್ತಿರುವುದು ನಮ್ಮ ಜಾಗ, ಇದು ಹೇಗೆ ಅತಿಕ್ರಮವಾಗುತ್ತದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಇದೆ. ಇದು ನಮ್ಮ ಸ್ವತ್ತು. ಕೆಲವು ದಿನಗಳ ಹಿಂದೆ ಇಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯೊಡ್ಡಿದ ಪರಿಣಾಮ ನ್ಯಾಯಾಲಯದಿಂದ ಅನುಮತಿ ಪಡೆದು ಕಟ್ಟಡ ನಿರ್ಮಿಸುತ್ತಿದ್ದೇನೆ ಎಂದರು.
ಕಟ್ಟಡ ಕಾಮಗಾರಿ ಕಾನೂನು ಬಾಹಿರ: ಡಿಸಿಎಫ್
ಡಿಸಿಎಫ್ ಏಡುಕುಂಡಲು, 1923ರ ಬ್ರಿಟಿಷ್ ಕಾಲದಿಂದಲೂ ಈ ಜಾಗ ಅರಣ್ಯ ಇಲಾಖೆ ಹೆಸರಿನಲ್ಲಿದೆ. ಕೊಯಮತ್ತೂರು ಜಿಲ್ಲೆಗೆ ಒಳಪಟ್ಟಿದ್ದ ಕಾಲದ ನಕ್ಷೆಯಲ್ಲಿ ಇಂದಿಗೂ 94ಡಿ ಸರ್ವೆ ನಂಬರ್ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ನಮೂದಾಗಿದೆ. ಆದರೆ, 1993ರಲ್ಲಿ ಇದಕ್ಕೆ ನಕಲಿ ದಾಖಲಿ ಸೃಷ್ಟಿಸಿ ಅಕ್ರಮವಾಗಿ ಪಡೆಯಲಾಗಿದೆ. ಇದನ್ನು ತಿಳಿದ ಗ್ರಾಮ ಪಂಚಾಯಿತಿ ನೀಡಿದ್ದ ಕಟ್ಟಡ ಪರವಾನಗಿಯನ್ನು ಸಹ ಸದ್ಯ ರದ್ದುಗೊಳಿಸಿದೆ. ಇಷ್ಟಾದರೂ, ಇಲ್ಲಿ ಕಟ್ಟಡ ಕಾಮಗಾರಿಗೆ ಮುಂದಾಗಿರುವುದು ಕಾನೂನು ಬಾಹಿರ ಎಂದು ಡಿಸಿಎಫ್ ಹೇಳಿದರು.
ಇದನ್ನೂ ಓದಿ: ನಕಲಿ ಚಿನ್ನ ನೀಡಿ ಬರೋಬ್ಬರಿ 4 ಲಕ್ಷ ರೂ. ವಂಚನೆ: ಕೊನೆಗೂ ತಗಲಾಕಿಕೊಂಡ ಖತರ್ನಾಕ್ ಟೀಮ್
ನಿರ್ಧಾಕ್ಷಿಣ್ಯ ಕ್ರಮದ ಎಚ್ಚರಿಕೆ:
ಈ ಜಾಗ ನಮ್ಮ ಸ್ವಾಧೀನದಲ್ಲಿದೆ ಎಂದು ನ್ಯಾಯಾಲಯಕ್ಕೆ ನಕಲಿ ದಾಖಲೆ ನೀಡಿ ಕಟ್ಟಡ ಕಾಮಗಾರಿಗೆ ಆದೇಶ ಪಡೆದು ರಾತ್ರೋರಾತ್ರಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಜಾಗದ ಬಗ್ಗೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ. ಮೋಸ ವ್ಯಸಗಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆಸ್ತಿ ಹಾಗೂ ಸ್ವತ್ತು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಎಫ್ ಏಡುಕುಂಡಲು ಎಚ್ಚರಿಸಿದರು.
ಪರಿಸ್ಥಿತಿ ತಿಳಿಗೊಳಿಸಿದ ಅಧಿಕಾರಿ
ಪರಿಸ್ಥಿತಿ ಬಿಗಡಾಯಿಸುತ್ತಿದಂತೆ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ನಾಗರಾಜು, ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದವರಿಗೆ ಗ್ರಾ.ಪಂ ನೀಡಿದ್ದ ಕಟ್ಟಡ ಕಾಮಗಾರಿ ಲೈಸನ್ಸ್ ಅನ್ನು ಪಂಚಾಯಿತಿ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಆದ್ದರಿಂದ ಈ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿ, ಪರಿಸ್ಥಿತಿ ತಿಳಿಗೊಳಿಸಿದರು.