ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯ ವ್ಯಾಪ್ತಿಯ ಬೇಡಗುಳಿ ಆದಿವಾಸಿ ಕಾಲೋನಿಯಲ್ಲಿ ಸೋಲಿಗರ ಎರಡು ಮನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ನೆಲಸಮಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ(ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಬೇಡಗುಳಿಯಲ್ಲಿ ಸೋಲಿಗ ಸಮುದಾಯದ ಮಸಣಮ್ಮ ಹಾಗೂ ಪಾರ್ವತಮ್ಮ ಎಂಬ ಇಬ್ಬರ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಆರೋಪಿಸಿದೆ.
ಬೇಡಗುಳಿಯಲ್ಲಿ ಸೋಲಿಗ ಸಮುದಾಯದ 12 ಕುಟುಂಬಗಳು ವಾಸವಾಗಿದ್ದು, ತೆರವುಗೊಳಿಸದಂತೆ ಜಿಲ್ಲಾಧಿಕಾರಿ, ಸಿಸಿಎಫ್, ಡಿಸಿಎಫ್, ಎಸಿಎಫ್ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಆದರೂ ಜ. 31ರಂದು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಬಳಸಿ ಮನೆಗಳನ್ನು ನೆಲಸಮಗೊಳಿಸಿದ್ದಾರೆ ಎಂದು ದೂರಿದ್ದಾರೆ. 20005ರಿಂದ ವಾಸವಿರುವ ಆದಿವಾಸಿಗಳಿಗೆ 2006ರ ಅರಣ್ಯ ಹಕ್ಕು ಕಾಯ್ದೆಯ ಅಡಿ ಹಕ್ಕುಪತ್ರ ನೀಡಲು ಅವಕಾಶವಿದೆ. ಹೀಗಿದ್ದರೂ, ಮನೆಯವರ ಒಪ್ಪಿಗೆ ಇಲ್ಲದೇ ಮನೆ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಸ್ಥಳೀಯನಾದ ಅರಣ್ಯ ಇಲಾಖೆಯ ವಾಚರ್‌ನ ಮನೆಯನ್ನು ಸಹ ತೆರವುಗೊಳಿಸಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯಾದ ಮಾತ್ರಕ್ಕೆ ಆತನ ಹಕ್ಕುಗಳನ್ನು ಕಸಿದುಕೊಳ್ಳಬಹುದೇ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಪ್ರಶ್ನಿಸಿದ್ದಾರೆ.
ಅರಣ್ಯ ಇಲಾಖೆಯ ದೌಜರ್ನ್ಯದಿಂದ ಮನೆಯನ್ನು ಕಳೆದುಕೊಂಡು ಅತಂತ್ರರಾಗಿರುವ ಈ ಎರಡು ಕುಟುಂಬಗಳು ಸದ್ಯ ಅಕ್ಕಪಕ್ಕದ ಮನೆಗಳಲ್ಲಿ ವಾಸವಾಗಿದ್ದಾರೆ. ಬ್ರಿಟಿಷರು ಬಿಟ್ಟುಹೋದ ಆಕ್ರಮಣಕಾರಿ ನೀತಿ, ದೌರ್ಜನ್ಯಗಳನ್ನು ಅರಣ್ಯ ಇಲಾಖೆಯು ಮುಂದುವರೆಸಿದೆ ಎಂದು ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: ಇಂದು ಪಂಚಮಸಾಲಿ ಶ್ರೀಗಳನ್ನು ಭೇಟಿಯಾಗಲಿರುವ ಸಚಿವ ಸಿಸಿ ಪಾಟೀಲ
ಕಾಡಿನಲ್ಲಿ 75 ವರ್ಷಗಳಿಂದ ಇರುವ ಹಾಗೂ ಮೂರು ತಲೆಮಾರಿನಿಂದ ಅರಣ್ಯದಲ್ಲಿ ವಾಸವಿರುವ ಆದಿವಾಸಿಗಳಿಗೆ 2005ರ ಅರಣ್ಯ ಹಕ್ಕು ಕಾಯ್ದೆಯಡಿ ಸಮುದಾಯ ಹಕ್ಕುಪತ್ರ ನೀಡಲು ಅವಕಾಶವಿದೆ. ಹೊಸದಾಗಿ ಕೊಡಲು ಅವಕಾಶವಿಲ್ಲ. ನಾವು ತೆರವುಗೊಳಿಸಿರುವ ಮಾದ ಎಂಬ ವಾಚರ್ ಸೇರಿದಂತೆ ಇತರೆ ಮೂರು ಕುಟುಂಬಗಳಿಗೆ ರಾಮಯ್ಯನ ಪೋಡಿನಲ್ಲಿ ನಿವೇಶನ ಹಾಗೂ ಜಮೀನು ನೀಡಲಾಗಿದೆ. ಅವರ ಕುಟುಂಬದ ಇತರೆ ಹೊಸ ತಲೆಮಾರಿನ ಸದಸ್ಯರೇ ಹುಲಿಸಂರಕ್ಷಿತ ಪ್ರದೇಶದಲ್ಲಿ ವಾಸವಿದ್ದಾರೆ. ಅವರಿಗೆ ಅರಣ್ಯ ಹಕ್ಕುಪತ್ರ ನೀಡಲು ಆಗುವುದಿಲ್ಲ ಎಂದು ಡಿಸಿಎಫ್ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಇನ್ನು, ಮನೆ ಧ್ವಂಸದಿಂದ ನಮ್ಮ ಬದುಕು ಬೀದಿಗೆ ಬಿದ್ದಿದೆ. ನಾವು ಎಲ್ಲಿ ಹೋಗಿ ಜೀವನ ಮಾಡುವುದು? ತಲಾತಲಾರಂಗಗಳಿಂದ ಇಲ್ಲೇ ಇದ್ದೇವೆ. ನಮಗೆ ಪರಿಹಾರ ಕೊಡಿ. ನ್ಯಾಯ ಕೊಡಿಸಿ. ನಮಗೆ ಸರ್ಕಾರ ಮನೆ ಕಟ್ಟಿಕೊಡಬೇಕು ಎಂಬುದು ಮನೆ ಕಳೆದುಕೊಂಡ ಮಸಣಮ್ಮ ಅವರ ಒತ್ತಾಯವಾಗಿದೆ.