ಚಾಮರಾಜನಗರ: ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಈಗಾಗಲೇ ಕೇಂದ್ರಕ್ಕೆ ಎಲ್ಲ ಮಾಹಿತಿಯನ್ನು ಕೊಟ್ಟಿದ್ದೇನೆ. ಗಡಿವಿವಾದ ಪ್ರಕರಣವನ್ನು ಇನ್ನೂ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿಲ್ಲ. ದೆಹಲಿಗೆ ಹೋಗುತ್ತಿದ್ದೇನೆ ಬುಧವಾರ ಸಂಜೆ 7 ಗಂಟೆಗೆ ಸಭೆ ಇದೆ, ನಮ್ಮ ಅಡ್ವೊಕೇಟ್ ಜನರಲ್ ಕೂಡ ಇರ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯ ಪುನರ್ ವಿಂಗಡಣಾ ಸಂದರ್ಭದಲ್ಲಿ ಏನಾಗಿದೆ, ನಂತರ ಏನು ಬೆಳವಣಿಗೆ ಆಗಿದೆ, ಎಲ್ಲದರ ಬಗ್ಗೆ ಈಗಾಗಲೇ ಮಾಹಿತಿ ಕೊಟ್ಟಿದ್ದೇವೆ. ಗಡಿ ವಿವಾದದ ಬಗ್ಗೆ ನಮ್ಮ ಅಚಲವಾದ ನಿಲುವೇನಿದೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡುವ ಕುರಿತು ಪ್ರತಿಕ್ರಿಯಿಸಿ, ಈ ವಿಚಾರ ವನ್ಯಜೀವಿ ಮಂಡಳಿ ಮುಂದೆ ಇದೆ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬೆಟ್ಟದ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶಗಳಿಗೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಹಲವು ಸ್ಪಷ್ಟನೆ ಕೇಳಿದ್ದೇನೆ. ಇನ್ನೂ ಯಾವ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.
ಬೆಟ್ಟಕ್ಕೆ ಸಕಲ ಸೌಲಭ್ಯ: ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿಎಂ ಬಸವರಾಜ ಬೊಮ್ಮಾಯಿ ಪ್ರಾಧಿಕಾರದ ಮೊದಲ ಸಭೆ ಸಂಜೆ ನಡೆಸಿದರು. ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಿದರು.
ಮಹದೇಶ್ವರಬೆಟ್ಟಕ್ಕೆ ಪ್ರತಿನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಜಾತ್ರೆಗಳ ಸಮಯದಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಭಕ್ತಾಧಿಗಳ ವಾಸ್ತವ್ಯಕ್ಕಾಗಿ ಡಾಮಿಟರಿ ನಿರ್ಮಾಣ ಮಾಡಬೇಕು. ಕ್ಷೇತ್ರದಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಗಿ ಬಹಳ ವರ್ಷಗಳಾಗಿವೆ. ಇದು ಅಗತ್ಯವಾಗಿ ಆಗಬೇಕಾದ ಕೆಲಸ. ಎಲ್ಲಾ ಭಕ್ತರಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯವನ್ನು ಸಮರ್ಪಕವಾಗಿ ಕಲ್ಪಿಸಲು ಸಭೆಯಲ್ಲಿ ಸಿಎಂ ಸೂಚಿಸಿದ್ದಾರೆ.
ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿರುವ ಮಹದೇಶ್ವರರ ಬೃಹತ್ ಪ್ರತಿಮೆಯನ್ನು ಮುಂದಿನ ತಿಂಗಳ ವೇಳೆಗೆ ಪೂರ್ಣಗೊಳಿಸಿ ಉದ್ಘಾಟಿಸಲು ಸಿದ್ಧಪಡಿಸಬೇಕು. ಇದಕ್ಕೆ ಹೊಂದಿಕೊಂಡಂತಿರುವ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ನಿರ್ದೇಶನ ಕೊಟ್ಟಿದ್ದಾರೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ