ಚಾಮರಾಜನಗರ: ಸುಮಾರು ಒಂದು ನೂರು ವರ್ಷಗಳಿಂದ ತಾವು ವಾಸಿಸುತ್ತಿರುವ ಮನೆಯ ಜಾಗ ಯಾರದು? ಯಾರಾದರೂ ಬಂದು ಈ ಜಾಗ ನಮ್ಮದು, ನೀವಿಲ್ಲಿಂದ ಹೋಗಿ ಎಂದರೆ ಎಲ್ಲಿಗೆ ಹೋಗುವುದು? ಎಂಬಿತ್ಯಾದಿ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದ ಇಲ್ಲಿನ ನಿವಾಸಿಗಳು ಈಗ ನಿಟ್ಟುಸಿರು ಬಿಡುವ ಕಾಲ ಬಂದಿದೆ.
ನಗರದ ಕರಿನಂಜನಪುರ-ನ್ಯಾಯಾಲಯ ರಸ್ತೆಯಲ್ಲಿರುವ ಒಂಬತ್ತನೇ ವಾರ್ಡ್ಗೆ ಸೇರಿದ ಸುಮಾರು 92 ಮನೆಗಳ ಸಮೂಹವಿರುವ ಪೌರಕಾರ್ಮಿಕರ ಕಾಲೊನಿಗೆ ಹಕ್ಕುಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿತರಿಸಿದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಈ ಕಾಲೊನಿಯ 84 ಮನೆಗಳಿಗೆ ಹೊಸದಾಗಿ ಮನೆಗಳನ್ನು ಕಟ್ಟಿಸಿಕೊಡುವ ಭರವಸೆ ನೀಡಿದರು.
ಕುದುರೆ ಕಟ್ಟುತ್ತಿದ್ದ ಜಾಗ: ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಮಹಾರಾಜರಾಗಿದ್ದ ಸಂದರ್ಭದಲ್ಲಿ ಕುದುರೆ ಕಟ್ಟಲು ಚಾಮರಾಜನಗರದಲ್ಲಿ ನಿರ್ಮಿಸಿದ್ದ ಮನೆಗಳನ್ನೇ ಅಂದು ಪುರದ ಶುಚಿತ್ವ ಕಾಪಾಡುತ್ತಿದ್ದ ಪೌರಕಾರ್ಮಿಕರಿಗೆ ನೀಡಿದ್ದರು. ಕೇವಲ ಎಂಟತ್ತು ಜನರಿದ್ದ ಸಮೂಹಕ್ಕೆ ಅಂದು ಮನೆಗಳನ್ನು ನೀಡಲಾಯಿತು. ಜನಸಂಖ್ಯೆ ಹೆಚ್ಚಿದಂತೆಲ್ಲ ಅಕ್ಕಪಕ್ಕದಲ್ಲೇ ಪುಟ್ಟಪುಟ್ಟ ಗುಡಿಸಲುಗಳು ತಲೆ ಎತ್ತಿದ್ದವು.
ಸ್ವಾತಂತ್ರ್ಯಪೂರ್ವದಲ್ಲೇ ನಿರ್ಮಾಣವಾಗಿದ್ದ ಹಳೆಯ ಮನೆಗಳನ್ನೇ ಇತ್ತೀಚಿನ ವರ್ಷಗಳಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನವೀಕರಿಸಲಾಗಿತ್ತು. ಆದರೆ ಯಾವುದೇ ಕುಟುಂಬಕ್ಕೂ ತಾವು ವಾಸಿಸುತ್ತಿರುವ ಮನೆಗಳ ಮೇಲೆ ಯಾವುದೇ ಹಕ್ಕಿರಲಿಲ್ಲ. ಹೀಗಾಗಿ ಹತ್ತಾರು ವರ್ಷಗಳಿಂದ ಬಯಸುತ್ತಿದ್ದ ಹಕ್ಕು ಇದೀಗ ಒದಗಿ ಬಂದಿದೆ.
ಹತ್ತಾರು ವರ್ಷಗಳಿಂದ ತಮ್ಮ ಮನೆಗಳಿಗೆ ಹಕ್ಕುಪತ್ರ ಇಲ್ಲದೇ ತೊಂದರೆಗೆ ಸಿಲುಕಿದ್ದ ಇಲ್ಲಿನ ನಿವಾಸಿಗಳು ಈಗ ನಿರಾಳರಾಗಿದ್ದಾರೆ. ನಗರಸಭೆ ಸದಸ್ಯ ಗಾಳಿಪುರ ಮಹೇಶ್ ಒತ್ತಾಸೆ ಬಳಿಕ ಕನಸು ನನಸಾಗುತ್ತಿದ್ದು, ಕಳೆದ ವರ್ಷ ಈ ಕಾಲೊನಿಗೆ ಬೀದಿದೀಪ ಅಳವಡಿಸಿ ಮನೆಗಳ ಮುಂದೆ ಬೆಳಕು ಹರಿಸಲಾಗಿತ್ತು. ಈಗ ಹಕ್ಕುಪತ್ರ ನೀಡುವ ಮೂಲಕ ಮನದಲ್ಲೂ ಬೆಳಕು ತುಂಬಿದೆ.
ಹಕ್ಕುಪತ್ರ ಪಡೆಯೋದು ನಮ್ಮ ಕನಸಾಗಿತ್ತು. ಆದರೆ ಈ ಕಾಲೊನಿಯಲ್ಲಿ ಈವರೆಗೆ ನಾವೆಲ್ಲರೂ ಅನ್ಯೋನ್ಯತೆಯಿಂದ ವಾಸ ಮಾಡುತ್ತಾ ಬಂದಿದೀವಿ. ಆದರೆ ನಮ್ಮ ಮೊಮ್ಮಕ್ಕಳು ಹೀಗೆಯೇ ಸರಿದೂಗಿಸಿಕೊಂಡು ಹೋಗಲಾರರು. ಆದ್ದರಿಂದ ಸರ್ಕಾರ ನಮ್ಮ ಇಡೀ ಕಾಲೊನಿಯನ್ನೇ ನವೀಕರಿಸಿ, ಸುಸಜ್ಜಿತ ರಸ್ತೆ, ನೀರು, ಚರಂಡಿ, ಮಕ್ಕಳು ಆಟವಾಡಲು ಪಾರ್ಕ್, ಸಮುದಾಯ ಭವನ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಾರೆ ಇಲ್ಲಿನ ನಿವಾಸಿ ಸರಸಮ್ಮ.
ಹಕ್ಕು ಪತ್ರ ಕೊಡಿಸಿದ್ದರ ಬಗ್ಗೆ ನಗರಸಭಾ ಸದಸ್ಯ ಗಾಳಿಪುರ ಮಹೇಶ್ ಮಾತನಾಡಿ, ತಾನು ಒಂಬತ್ತನೇ ವಾರ್ಡ್ನಲ್ಲಿ ಗೆದ್ದ ನಂತರ ಮಾಡಿದ ಮೊದಲ ಕೆಲಸವೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಇಲ್ಲಿನ ನಿವಾಸಿಗಳ ಬಗ್ಗೆ ಚರ್ಚೆ ಮಾಡಿದ್ದು. ಈವರೆಗೆ ಅವರ ಹೆಸರಲ್ಲಿ ಹಕ್ಕುಪತ್ರವೇ ಇಲ್ಲದಿರುವುದರಿಂದ ಸರ್ಕಾರದ ಯಾವುದೇ ಸವಲತ್ತನ್ನೂ ಅವರು ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಇಲ್ಲಿನ ಮನೆಗಳ ಹಿರಿಯ ನಿವಾಸಿ ಹೆಸರಲ್ಲಿ ಹಕ್ಕುಪತ್ರ ಕೊಡಲಾಗಿದೆ. ಹಕ್ಕುಪತ್ರ ನೀಡಿರುವುದು ವೈಯಕ್ತಿಕವಾಗಿ ನನಗೂ ಖುಷಿ ನೀಡಿದೆ ಎಂದರು.
ಇದನ್ನೂ ಓದಿ : ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆ.. ಭರವಸೆ ಸಾಲದು, ಅಧಿಕೃತ ಆದೇಶ ಹೊರಡಿಸಿ ಎಂದ ಸಿದ್ದರಾಮಯ್ಯ