ಚಾಮರಾಜನಗರ: ಲಸಿಕೆ ಪಡೆಯಲು ಹಿಂದೇಟು, ಪರೀಕ್ಷೆ ಮಾಡಿಸಿಕೊಳ್ಳಲು ಭಯ, ಕೇರ್ ಸೆಂಟರ್ಗೆ ಹೋಗಲು ಭೀತಿ.. ಹೀಗೆ ಸಾಕಷ್ಟು ಅರಿವಿನ ಕೊರತೆಯ ನಡುವೆಯೂ ಚಾಮರಾಜನಗದ ಆದಿವಾಸಿಗಳು ಕೋವಿಡ್ ಜಯಿಸಿದ್ದಾರೆ. ಈ ಕುರಿತು ಗಿರಿಜನ ಕಲ್ಯಾಣಾಧಿಕಾರಿ ಹೊನ್ನೇಗೌಡ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 158 ಹಾಡಿಗಳಿದ್ದು, 75 ಮಂದಿಗೆ ಎರಡನೇ ಅಲೆಯಲ್ಲಿ ಕೋವಿಡ್ ತಗುಲಿತ್ತು. ಇವರಲ್ಲಿ ಓರ್ವ ಮಾತ್ರ ಮೃತಪಟ್ಟಿದ್ದು, ಸಾವಿನ ಬಳಿಕ ನಡೆದ ಪರೀಕ್ಷೆಯಲ್ಲಿ ಕೋವಿಡ್ ದೃಢವಾಗಿತ್ತು ಎಂದು ಅಧಿಕಾರಿ ಹೊನ್ನೇಗೌಡ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಹಾಡಿಗಳು ಸದ್ಯ ಕೊರೊನಾ ಮುಕ್ತವಾಗಿದ್ದು, ಕೊರೊನಾ ದೃಢವಾದ ಬಳಿಕ ಆದಿವಾಸಿಗಳು ಗಂಭೀರ ಸ್ಥಿತಿಗೆ ತೆರಳಲಿಲ್ಲ. ಲಾಕ್ಡೌನ್ ವೇಳೆ ಪೌಷ್ಟಿಕ ಆಹಾರ ವಿತರಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.
ನೆರವಾದ ಸೋಲಿಗರ ಕೇರ್ ಸೆಂಟರ್: ರಾಜ್ಯದಲ್ಲೇ ಮೊದಲ ಬಾರಿಗೆ ಸೋಲಿಗರಿಗಾಗಿಯೇ ಹನೂರು ತಾಲೂಕಿನ ಜೀರಿಗೆ ಗದ್ದೆಯಲ್ಲಿ ರೂಪುಗೊಂಡ ಸೋಲಿಗರ ಕೋವಿಡ್ ಕೇರ್ ಸೆಂಟರ್ ಗಿರಿಜನರಿಗೆ ಜಾಗೃತಿ ಮೂಡಿಸಲು ಸಾಕಷ್ಟು ಸಹಕಾರಿಯಾಗಿದೆ. ಸೋಂಕಿಗೆ ಒಳಗಾಗಿದ್ದ ಗಿರಿಜನರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ, ಆರೈಕೆ ಕೊಟ್ಟು ಹಾಡಿಗಳಲ್ಲಿನ ಸೋಂಕಿತರು ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದವರು, ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಹಾಡಿಗಳ ಜನರು ಇದೀಗ ಲಸಿಕೆ ಹಾಕಿಸಿಕೊಂಡು ಚೇತರಿಸಿಕೊಂಡಿದ್ದಾರೆ. ಜೀರಿಗೆ ಗದ್ದೆ ಗ್ರಾಮದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ತೆರೆದಿದ್ದ ಕೊರೊನಾ ಕೇರ್ ಸೆಂಟರ್‌ನಲ್ಲಿ 31 ಸೋಂಕಿತರು ದಾಖಲಾಗಿದ್ದರು. ಈಗ ಎಲ್ಲರೂ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ.