ಚಾಮರಾಜನಗರ : ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ನೆರವಿಗೆ ನಿಂತಿರುವ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಈಗ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ವಿಶೇಷಚೇತನ ಮಕ್ಕಳ ಪಾಲಿಗೆ ಬೆಳಕಾಗುತ್ತಿದೆ.
ಇಂದು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ನ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಶಾಲೆಗೆ ಭೇಟಿ ನೀಡಿತ್ತು. ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿ ವಸತಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಸತಿ ಶಾಲೆಯು ಬಾಡಿಗೆ ಕಟ್ಟಡದಲ್ಲಿದ್ದು ಅವಕಾಶ ಕೊಟ್ಟರೇ ಇದೇ ಕಟ್ಟಡವನ್ನು ದುರಸ್ತಿ ಮಾಡಿಸಲಾಗುವುದು. ಇಲ್ಲವೇ ಬೇರೆ ಕಟ್ಟಡ ನೋಡಿ ಶಾಲೆಯನ್ನು ಸ್ಥಳಂತಾರಿಸುವ ಕೆಲಸವನ್ನು ಚಾರಿಟಬಲ್ ಟ್ರಸ್ಟ್ ಮಾಡಲಿದೆ. ಜತೆಗೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶಾಶ್ವತ ಪರಿಹಾರವೊಂದನ್ನು ಒದಗಿಸಲು ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.
ಪೃಥ್ವಿ ವಿಶೇಷ ಚೇತನರ ಶಾಲೆಯಲ್ಲಿ 40ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಮಳೆ ಬಂದರೆ ಸೋರುವ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಲಾಕ್ಡೌನ್ ವೇಳೆ, ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದನ್ನು ಮನಗಂಡು ಸುದೀಪ್ ಟ್ರಸ್ಟ್ ನೆರವಿಗೆ ಧಾವಿಸಿದೆ.