ಚಾಮರಾಜನಗರ: ಈಗ ಸ್ಟಾರ್ಡಮ್ ಗಿಟ್ಟಿಸಿಕೊಂಡಿರುವ ನಟರಲ್ಲಿ ಕೆಲವರು ಹುಟ್ಟಿನಿಂದಲೇ ಸಿನಿಮಾ ಹಿನ್ನೆಲೆ ಉಳ್ಳವರಾಗಿದ್ದರೆ, ಮತ್ತೆ ಕೆಲವರು ಏನೂ ಇಲ್ಲದೆ, ಗಾಡ್ ಫಾದರ್ ಇಲ್ಲದೆ ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬಂದಿರುವವರು. ಅಂತವರಲ್ಲಿ ಡಾಲಿ ಧನಂಜಯ್ ಕೂಡಾ ಒಬ್ಬರು.
ಪುಟ್ಟ ಹಳ್ಳಿಯೊಂದರಿಂದ ಬಂದ ಧನಂಜಯ್ಗೆ ಬ್ರೇಕ್ ನೀಡಿದ್ದು 'ಟಗರು' ಸಿನಿಮಾ. ಅದಕ್ಕಿಂದ ಮೊದಲು ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಹೇಳಿಕೊಳ್ಳುವಂತ ಹೆಸರು ಸಿಕ್ಕಿರಲಿಲ್ಲ. ಆದರೆ ಯಾವಾಗ 'ಟಗರು' ಸಿನಿಮಾ ಬಿಡುಗಡೆಯಾಯಿತೋ ಅವರು ಮಾಡಿದ ಡಾಲಿ ಪಾತ್ರ ಇದೀಗ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಇಂದು ಕೊಳ್ಳೇಗಾಲದ ಬಸವಲಿಂಗಪ್ಪ ಕಾಲೇಜಿನಲ್ಲಿ ಜೆಎಸ್ಬಿ ಪ್ರತಿಷ್ಠಾನ ಮೈಸೂರು ಹಾಗೂ ನಟನ ರಂಗಶಾಲೆ ಸಂಯುಕ್ತವಾಗಿ ಆಯೋಜಿಸಿದ್ದ ರಜಾ ಮಜಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಎಲ್ಲಾ ಹಳ್ಳಿಗಳಲ್ಲಿನ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಅವರಿಗೆ ಪ್ರೋತ್ಸಾಹಿಸಬೇಕಿದೆ ಎಂದು ಅವರು ಆಶಿಸಿದರು.
ಸಣ್ಣ ನಾಟಕದಲ್ಲಿ ದಡ್ಡ ಕೃಷ್ಣನ ಪಾತ್ರವನ್ನು ಅಭಿನಯಿಸುವ ಮೂಲಕ ನನ್ನ ಜನಿ೯ ಪ್ರಾರಂಭಿಸಿದೆ. ಮೈಸೂರಿನಲ್ಲಿ ರಂಗಾಯಣದ ಒಡನಾಟದ ಮೂಲಕ ನಾಟಕಗಳಲ್ಲಿ ಅಭಿನಯಿಸಿದೆ. ನನ್ನ ಇಡೀ ಸಿನಿ ಜರ್ನಿಯಲ್ಲಿ ರಂಗಾಯಣದ ಸಹಕಾರ ಇದೆ ಎಂದು ನೆನೆದರು.ಬದುಕಿಗೆ ಬೇಕಾದನ್ನು ರಂಗಭೂಮಿ ಕಲಿಸುತ್ತಾ ಹೋಗಲಿದೆ. ಚೆನ್ನಾಗಿ ಓದುವುದರ ಜೊತೆಗೆ ಕಲೆಯನ್ನು ರೂಢಿಸಿಕೊಳ್ಳಬೇಕು. ಕಲಿತ ಕಲೆಯಲ್ಲಿ ಮಹಾತ್ಮಗಾಂಧಿ, ಬುದ್ಧ, ಅಲ್ಲಮ್ಮರ ಸಂದೇಶಗಳ ಪಾತ್ರ ಮಾಡಿ ಕಲಿಯಿರಿ, ಕಲಿಸಿರಿ. ವಿದ್ಯಾಥಿ೯ ದೆಸೆಯಲ್ಲಿಯೇ ಕಲೆ ಕಲಿತರೆ ಕೆಲಸದ ಜೊತೆ ಕಲಿತ ಕಲೆ ಕೂಡಾ ಕೈಹಿಡಿಯಲಿದೆ ಎಂದು ಕಿವಿಮಾತು ಹೇಳಿದರು. ಧನಂಜಯ್ ಜೊತೆಗೆ ಮಂಡ್ಯ ರಮೇಶ್, ನಟಿ ರಾಧಿಕಾ ಚೇತನ್ ಇನ್ನಿತರರು ಇದ್ದರು.