ಕೊಳ್ಳೇಗಾಲ: ಚಾಮರಾಜನಗರದಲ್ಲಿ ಸುಮಾರು 300 ಕೆರೆಗಳಿದ್ದು 60 - 70 ಕೆರೆಯಲ್ಲಿ ಮಾತ್ರ ನೀರು ಸಂಗ್ರಹವಾಗುತ್ತಿದೆ. ಮಿಕ್ಕ ಕೆರೆಗಳಿಗೆ ನೀರು ತುಂಬಿಸಲು ಯೋಜನೆಗಳಿಲ್ಲ. ಈ ಹಿನ್ನೆಲೆ ಆಲೋಚನೆ ಮಾಡಿ ಪ್ರತಿ ಕೆರೆಗೂ ನೀರು ತುಂಬಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಕೆರೆಗಳು, ನೀರಿನ ಸಂಪನ್ಮೂಲ, ಕೆರೆಗಳ ಸ್ಥಿತಿಗತಿಯ ಬಗ್ಗೆ ಚರ್ಚಿಸಿ. ಇಲಾಖೆಯ ಮಾಸ್ಟರ್ ಪ್ಲಾನ್ನಂತೆ ನೀರು ತುಂಬಿಸುವ ಕಾರ್ಯದಲ್ಲಿ ಏನೇನೂ ಕೊರತೆಯಿದೆ ಎಂದು ಶಾಸಕರೊಂದಿಗೆ ಸಭೆ ನಡೆಸಿದ್ದೇನೆ. ಜಿಲ್ಲೆಯಲ್ಲಿರುವ 300 ಕೆರೆಗಳ ಪೈಕಿ 60-70 ಕೆರೆಯಲ್ಲಿ ಮಾತ್ರ ನೀರು ಸಂಗ್ರಹವಾಗುತ್ತಿದೆ. ಉಳಿದ ಕೆರಗಳಿಗೆ ಯಾವುದೇ ಯೋಜನೆ ಇಲ್ಲದರಿಂದ ಮುಂದಿನ ದಿನಗಳಲ್ಲಿ ಪ್ರತಿ ಕೆರೆಗಳಲ್ಲಿ 60ರಷ್ಟು ನೀರು ಭರ್ತಿಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೊಳ್ಳೇಗಾಲ ಪಟ್ಟಣದಲ್ಲಿರುವ ಪ್ರಮುಖ ನಾಲ್ಕು ಕೆರೆಗಳ ಅಭಿವೃದ್ಧಿಗೆ ಶಾಸಕ ಎನ್.ಮಹೇಶ್ 25 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಕೇಳಿದ್ದಾರೆ. ಈ ಕೆರೆಗಳು ಬೃಹತ್ ನೀರಾವರಿಗೆ ಸೇರಿದ್ದು ಈ ಬಗ್ಗೆ ಮುಖ್ಯ ಮಂತ್ರಿಗಳ ಗಮನ ಸೆಳೆಯುತ್ತೇನೆ. ಇನ್ನೂ ಒತ್ತುವರಿಯಾಗಿರುವ ಕೆರೆಗಳ ಸರ್ವೆಯನ್ನು ಮಾಡಿಸಲಾಗುತ್ತದೆ. ಹಾಗೆಯೇ ಒತ್ತುವರಿ ತೆರವಿಗೂ ಕ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.