ಕೊಳ್ಳೇಗಾಲ: ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಪ್ರೇಮಿಗಾಗಿ ಠಾಣೆ ಮೆಟ್ಟಿಲೇರಿದ್ದ ಯುವತಿಯೋರ್ವಳನ್ನು ಪ್ರಿಯಕರನನೊಡನೆ ಒಂದುಗೂಡಿಸುವ ಮೂಲಕ ಪೊಲೀಸರು ಪ್ರಕರಣವನ್ನು ಸುಖಾಂತ್ಯ ಗೊಳಿಸಿರುವ ಘಟನೆ ಇಲ್ಲಿನ ಪಟ್ಟಣ ಠಾಣೆಯಿಂದ ವರದಿಯಾಗಿದೆ.
ಪಟ್ಟಣ ವ್ಯಾಪ್ತಿಯ ಶಂಕನಪುರ ಬಡಾವಣೆಯ ಮಹದೇವ ಎಂಬುವರ ಪುತ್ರ ರಾಕೇಶ್ ಅಲಿಯಾಸ್ ಪ್ರಸಾದ್ ಹಾಗೂ ಮುಳ್ಳೂರು ಗ್ರಾಮದ ಗೌರಿ, ಮತ್ತೆ ಪೊಲೀಸರ ಸಮ್ಮುಖದಲ್ಲಿ ಒಂದಾದ ಪ್ರೇಮಿಗಳು. ಬಾರ್ ಬೆಂಡಿಗ್ ಕೆಲಸ ಮಾಡುತ್ತಿದ್ದ ರಾಕೇಶ್ ಹಾಗೂ ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ಗೌರಿ ಅಲಿಯಾಸ್ ಮಂಗಳ ಗೌರಿ ಇಬ್ಬರು ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ರಾಕೇಶ್ ಪೋಷಕರು ಇವರ ಪ್ರೀತಿಯನ್ನು ಒಪ್ಪಿಕೊಳ್ಳದೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ರಾಕೇಶ್ ಕಳೆದ ಒಂದು ತಿಂಗಳಿಂದೀಚೆಗೆ ಗೌರಿಯನ್ನು ನಿರಾಕರಿಸುತ್ತಿದ್ದ. ಈಕೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದ ಇದರಿಂದ ಮನನೊಂದ ಗೌರಿ ಹಾಗೂ ಆಕೆಯ ಪೋಷಕರು ಕಳೆದ 10 ದಿನಗಳ ಹಿಂದೆ ಪ್ರಿಯಕರನ ವಿರುದ್ದ ಕೊಳ್ಳೇಗಾಲ ಪಟ್ಟಣ ಠಾಣೆ ಮೆಟ್ಡಿಲೇರಿದ್ದರು.
ಈ ವೇಳೆ ಪೊಲೀಸರು ಗ್ರಾಮದಲ್ಲಿ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ ಕಳುಹಿಸಿದ್ದರು. ಈ ವಿಚಾರವಾಗಿ ಎರಡು ಗ್ರಾಮಗಳ ನಡುವೆ ಎರಡೂ ಬಾರಿ ಪಂಚಾಯಿತಿ ನಡೆದರೂ ಪ್ರಕರಣ ಇತ್ಯಾರ್ಥವಾಗದ ಕಾರಣ ಕಳೆದ ಮೂರು ದಿನಗಳ ಹಿಂದೆ ಮತ್ತೆ ಗೌರಿ ಹಾಗೂ ಆಕೆಯ ಪೋಷಕರು ಪೊಲೀಸರ ಮೊರೆಹೋಗಿದ್ದರು.
ಇಂದು ಪಟ್ಟಣ ಠಾಣೆಯಲ್ಲಿ ಡಿವೈಎಸ್ಪಿ ಜಿ.ನಾಗರಾಜ ರವರ ನೇತೃತ್ವದಲ್ಲಿ ಸಿಪಿಐ ಶಿವರಾಜ್ ಮುಧೋಳ, ಹಾಗೂ ಪಟ್ಟಣ ಠಾಣೆ ಪಿಎಸ್ಐ ಪಿ.ಚೇತನ್ ರವರು ಎರಡು ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ವಿಚಾರ ನಡೆಸಿ ಪ್ರೇಮಿಗಳನ್ನು ಒಂದುಗೂಡಿಸುವ ಕಾರ್ಯಮಾಡಿದ್ದಾರೆ. ಕಳೆದ 10 ದಿನಗಳಿಂದ ಬಗೆಹರಿಯದೆ ಉಳಿದಿದ್ದ ಪ್ರಕರಣವನ್ನು ಕೊನೆಗೂ ಸುಖಾಂತ್ಯಗೊಳಿಸಿದ್ದಾರೆ. ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಶಂಕನಪುರದ ದೇವಸ್ಥಾನದಲ್ಲಿ ಪ್ರೇಮಿಗಳಿಬ್ಬರಿಗೂ ಮದುವೆ ನಡೆಸಲಾಗಿದೆ.