ಕೊಳ್ಳೇಗಾಲ(ಚಾಮರಾಜನಗರ): ಯುದ್ಧಪೀಡಿತ ರಾಷ್ಟ್ರದಿಂದ ತಾಯ್ನಾಡಿಗೆ ಹಿಂದಿರುಗಲು ಮತ್ತು ಅಲ್ಲಿರುವ ನರಕಸದೃಶ್ಯ ಪರಿಸ್ಥಿತಿ, ಭಾರತೀಯರಿಗೆ ಅಲ್ಲಿನ ರಾಯಭಾರ ಕಚೇರಿ ನೀಡಿದ ಸೂಚನೆಯ ಬಗ್ಗೆ ಉಕ್ರೇನ್ನಿಂದ ಭಾರತಕ್ಕೆ ನಿನ್ನೆ ರಾತ್ರಿ ವಾಪಸ್ ಆದ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ವೈದ್ಯಕೀಯ ವಿದ್ಯಾರ್ಥಿನಿ ಭೂಮಿಕಾ ಮಾತನಾಡಿದ್ದಾರೆ.
ಫೆ.15 ರಂದು ಆದಷ್ಟು ಬೇಗ ಉಕ್ರೇನ್ ತೊರೆಯುವಂತೆ ಅಲ್ಲಿನ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸಲಹೆ ನೀಡಿದ್ದರು. ಆದರೆ, ನಾವು ಆ ಸಲಹೆಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, 21 ರ ಬಳಿಕ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿತು. ನಮ್ಮಲ್ಲಿ ಆತಂಕ ಹೆಚ್ಚಾಯಿತು. ಉಕ್ರೇನ್ನಿಂದ ಭಾರತಕ್ಕೆ ಬರುವವರೆಗೂ ನಮ್ಮ ತ್ರಿವರ್ಣ ಧ್ವಜವೇ ನಮಗೆ ಶ್ರೀರಕ್ಷೆಯಾಗಿತ್ತು ಎಂದು ಭೂಮಿಕಾ ಹೇಳಿದರು.
ಯುದ್ಧ ಪ್ರಾರಂಭವಾಗಿ ನಾಲ್ಕೈದು ದಿನಗಳ ನಂತರ ನಾಗರಿಕರ ಮೇಲೂ ದಾಳಿ ನಡೆಯಲು ಪ್ರಾರಂಭವಾಯಿತು. ಆಗ ಮತ್ತಷ್ಟು ಆತಂಕಕ್ಕೀಡಾದೆವು. ಕೀವ್ನಿಂದ ಪೋಲ್ಯಾಂಡ್ಗೆ ಬರುವವರೆಗೂ 70 ಮಂದಿ ಭಾರತೀಯ ವಿದ್ಯಾರ್ಥಿಗಳು ದೇಶದ ಬಾವುಟ ಹಿಡಿದು ಬಂದಿದ್ದರಿಂದ ಸುರಕ್ಷಿತವಾಗಿ ನಾವು ಗಡಿ ತಲುಪಿದೆವು. ಅಲ್ಲಿಯವರೆಗೂ ಏನಾಗುತ್ತೆ ಎಂಬ ಆತಂಕ ಇತ್ತು. ನಂತರ ಭಾರತೀಯ ರಾಯಭಾರ ಕಚೇರಿ ನಮ್ಮ ದೇಶಕ್ಕೆ ಬರುವ ಎಲ್ಲಾ ವ್ಯವಸ್ಥೆ ಮಾಡಿತ್ತು. ಯಾವುದೇ ಆತಂಕವಿಲ್ಲದೆ ನಮ್ಮ ದೇಶಕ್ಕೆ ಬಂದಿಳಿದೆವು ಎಂದು ವಿವರಿಸಿದರು.
ನಾವು ಬದುಕಿ ಇಂಡಿಯಾಕ್ಕೆ ಹೋಗ್ತಿವಾ ಅನಿಸಿತ್ತು: ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಡೆಯುತ್ತಿದ್ದ ಬಾಂಬ್ ದಾಳಿಯ ಶಬ್ದ ಕೇಳಿದ್ರೆ ನಾವು ಮತ್ತೆ ಬದುಕಿ ವಾಪಸ್ ಹೋಗ್ತಿವಾ ಅನ್ನಿಸುತ್ತಿತ್ತು. ನಮಗೆ ವಾಪಸ್ ಹೋಗಲು ನಮ್ಮ ದೇಶವಿದೆ ಎಂಬ ಧೈರ್ಯವಿತ್ತು. ಆದರೆ, ಅಲ್ಲಿನ ಜನರ ಪರಿಸ್ಥಿತಿ ಬಹಳ ಕಷ್ಟಕವಾಗಿದೆ ಎಂದು ಉಕ್ರೇನ್ನ ರಣಭೀಕರತೆಯನ್ನು ಬಿಚ್ಚಿಟ್ಟರು.
ಶಾಸಕ ಎನ್. ಮಹೇಶ್ ಭೇಟಿ: ಉಕ್ರೇನ್ನಿಂದ ಕೊಳ್ಳೇಗಾಲಕ್ಕೆ ಸುರಕ್ಷಿತವಾಗಿ ವಾಪಸ್ ಆದ ವಿದ್ಯಾರ್ಥಿನಿ ಭೂಮಿಕಾ ನಿವಾಸಕ್ಕೆ ಶಾಸಕ ಎನ್.ಮಹೇಶ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ, ಸಿಹಿ ತಿನ್ನಿಸಿದರು.
ಬಳಿಕ ಮಾತನಾಡಿದ ಅವರು, ದೇಶದ ಸಾವಿರಾರು ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ರಷ್ಯಾ ಮತ್ತು ಉಕ್ರೇನ್ ತಕ್ಷಣವೇ ಯುದ್ಧ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಓದಿ; ಅಧಿಕ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಗೆ ತಕ್ಷಣ ಕ್ರಮ ಕೈಗೊಳ್ಳಿ: ಎಲಾನ್ ಮಸ್ಕ್