ಚಾಮರಾಜನಗರ: ಇಲ್ಲಿನ ಪ್ರಮುಖ ಯಾತ್ರಾಸ್ಥಳವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಮೂಲದ ಅನಿಲ್ (32) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.
ಅನಿಲ್ ಮತ್ತು ಕುಟುಂಬ ಇಂದು ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದರ್ಶನ ಮುಗಿಸಿ ವಾಪಸ್ ಹಿಂತಿರುಗುವಾಗ ಅನಿಲ್ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಕೂಡಲೇ ಆ್ಯಂಬುಲೆನ್ಸ್ನಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದ ಕಾರಣ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಜಯದೇವ ಆಸ್ಪತ್ರೆಗೆ ಕಳುಹಿಸಲು ಮುಂದಾಗಿದ್ದಾರೆ. ಈ ಮಧ್ಯೆ ಅನಿಲ್ ಅಸುನೀಗಿದ್ದಾರೆ ಎಂದು ಅನಿಲ್ ಪತ್ನಿ ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗುತ್ತದೆ, ಜೀವ ಉಳಿಯುತ್ತದೆ ಎಂಬ ಆಸೆಯೊಂದಿಗೆ ಬಂದರೆ ಇಲ್ಲೇ ಜೀವ ಹೋಯಿತು. ಏಕೆ ಆಸ್ಪತ್ರೆಗೆ ಬರಬೇಕು? ಎಂದು ಪತ್ನಿ ಲಕ್ಷ್ಮಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯಾಧಿಕಾರಿ ಸ್ಪಷ್ಟನೆ : ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದಾನೆ ಎಂಬ ಆರೋಪವನ್ನು ಆಸ್ಪತ್ರೆ ವೈದ್ಯಾಧಿಕಾರಿ ಡಾ ಮಂಜುನಾಥ್ ಅಲ್ಲಗಳೆದಿದ್ದು , ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಆಕ್ಸಿಜನ್ ಕೊಟ್ಟು ಮೈಸೂರಿಗೆ ಕಳುಹಿಸುವ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಮತ್ತೆ ಒಳಗೆ ಕರೆದು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ.ಯುವಕನ ಸಾವಿಗೆ ಆಕ್ಸಿಜನ್ ಕಾರಣವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಸ್ನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು : ಬಸ್ ಡ್ರೈವರ್, ಕಂಡಕ್ಟರ್ ಬಂಧನ