ಚಾಮರಾಜನಗರ: ಕಮರಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ರಂಗಸ್ವಾಮಿ(65) ಮೃತ ವ್ಯಕ್ತಿ. ದೇವಾಲಯದ ಹಿಂಭಾಗದಲ್ಲಿರುವ ವೀಕ್ಷಣಾ ಸ್ಥಳದ ಕಮರಿಗೆ ಹಾರಿ ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಜೆ ತೆರಳಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕಿತ್ಸೆ ಫಲಿಸದೇ ಸಾವು: ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗೇಟಿನಲ್ಲಿ ನಡೆದಿದ್ದ ಕಾರು-ಬೈಕ್ ಡಿಕ್ಕಿ ಪ್ರಕರಣದಲ್ಲಿ ಗಾಯಗೊಂಡಿದ್ದ ಹಿಂಬದಿ ಸವಾರ ಇಂದು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ನಿವಾಸಿ ನಾಗರಾಜು(33) ಮೃತಪಟ್ಟವರು. ಕೇರಳದ ಮಲಪ್ಪುರಂನ ಮಾಧವನ್ ಎಂಬಾತ ಓವರ್ ಟೇಕ್ ಮಾಡುವ ಭರದಲ್ಲಿ ಮಂಗಳವಾರ ರಾಘವಾಪುರ ಗೇಟಿನಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದ್ದರು. ಸ್ಥಳದಲ್ಲೇ ಮನು ಎಂಬ ಯುವಕ ಮೃತಪಟ್ಟಿದ್ದ, ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಸದ್ಯ, ಎರಡು ವಾಹನಗಳನ್ನು ವಶಕ್ಕೆ ಪಡೆದಿರುವ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಮೇಲೆ ಮರ ಬಿದ್ದು ಅವಾಂತರ: ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಜಲಾಶಯದ ಸಮೀಪವಿರುವ ನಿಸಾರ್ ಅಹಮದ್ ಎಂಬವರ ಮನೆ ಮೇಲೆ ಮರ ಬಿದ್ದು ಅವಾಂತರವಾಗಿದೆ. ಗಾಳಿ-ಮಳೆ ಹಿನ್ನೆಲೆ ಮನೆಗಳ ಮೇಲೆ ಮರ ಬೀಳಬಾರದು ಎಂದು ಮರ ಕಟಾವು ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ನಿಸಾರ್ ಅಹಮದ್ ಮನೆಯ ಛಾವಣಿ ಸಂಪೂರ್ಣ ಹಾನಿಯಾಗಿದ್ದು ಟಿವಿ, ಪ್ರಿಡ್ಜ್, ಮೊಬೈಲ್ ಸಂಪೂರ್ಣ ಹಾನಿಯಾಗಿದೆ. ಪರಿಹಾರ ಸಂಬಂಧ ಮೇಲಾಧಿಕಾರಿಗೆ ತಿಳಿಸಲಾಗಿದ್ದು ಅವರು ಕ್ರಮ ಕೈಗೊಳ್ಳಲಿದ್ದಾರೆಂದು ಕಿರಿಯ ಎಂಜಿನಿಯರ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮಾಲಿನ್ಯದಿಂದ 23 ಲಕ್ಷ ಮಂದಿ ಸಾವು.. ವಿಶ್ವದಲ್ಲಿಯೇ ಅತ್ಯಧಿಕ: ಅಧ್ಯಯನ