ಕೊಳ್ಳೇಗಾಲ (ಚಾಮರಾಜನಗರ): ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಂಗ್ರಹಿಸಿ, ಅವುಗಳನ್ನು ಮಾರಾಟ ಮಾಡಲು ರಾಜಾರೋಷವಾಗಿ ತೆರಳುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ದೇವಶೆಟ್ಟಿ (48) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 11 ಕೆ.ಜಿ ತೂಕದ 13 ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಸತ್ತೇಗಾಲ ಜಾಗೇರಿಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು, ಅದರ ತುಂಡುಗಳನ್ನು ಮನೆಯಲ್ಲಿಯೇ ಸಂಗ್ರಹಿಸಿಟ್ಟಿದ್ದ.
ಇಂದು ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಚೀಲದಲ್ಲಿ ತುಂಬಿಕೊಂಡು ಸತ್ತೇಗಾಲ - ಉಗನಿಯ ರಸ್ತೆಯಲ್ಲಿ ನಡೆದುಕೊಂಡೇ ಹೋಗುತ್ತಿದ್ದ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಂಚಾರಿದಳ ಪೊಲೀಸರನ್ನು ಕಂಡು ಓಡಲಾರಾಂಭಿಸಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು, ಮಾಲು ಸಮೇತ ಆರೋಪಿ ಸೆರೆಹಿಡಿದ್ದಿದ್ದಾರೆ.
ಓದಿ: ಯುವಕನ ಮೇಲೆ ಅತ್ಯಾಚಾರ ಎಸಗಿದ ಸಂಬಂಧಿ.. ತಂದೆ ಮೊಬೈಲ್ಗೆ ಬಂತು ಮಗನ ವಿಡಿಯೋ!
ಸದ್ಯ, ಆರೋಪಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಅರಣ್ಯ ಸಂಚಾರಿ ದಳದ ಪಿಎಸ್ಐ ಮುದ್ದುಮಾದೇವ, ಮುಖ್ಯಪೇದೆಗಳಾದ ಲೋಕೇಶ್, ಬಸವರಾಜು, ಶಂಕರ್, ತಖೀಉಲ್ಲಾ, ಕುಮಾರಸ್ವಾಮಿ, ರಾಮಚಂದ್ರ ಉಪಸ್ಥಿತರಿದ್ದರು.