ಚಾಮರಾಜನಗರ: ಅಧಿಕಾರಿಗಳಿಗೂ ರೈತರಿಗೆ ಹೆಚ್ಚು ಎಣ್ಣೆ ಸಿಗೇಕಾಯಿ ಸಂಬಂಧ. ಕೆಲಸ ಶೀಘ್ರ ಮಾಡಿಕೊಡಲ್ಲ, ಸುಮ್ಮನೆ ಅಲೆಸುತ್ತಾರೆ ಎಂಬ ಅಪವಾದ ಇದ್ದದ್ದೇ. ಆದರೆ ಇದಕ್ಕೆ ತದ್ವಿರುದ್ಧವಾಗಿ ನೆಚ್ಚಿನ ಅಧಿಕಾರಿಯ ಆರೋಗ್ಯಕ್ಕಾಗಿ ರೈತ ಮುಖಂಡ ಮಂಗಳವಾರ ಸಂಜೆ ಪೂಜೆ ಸಲ್ಲಿಸಿದ್ದಾರೆ.
ಹೌದು, ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ರೈತ ಮುಖಂಡ ಚಂದ್ರಶೇಖರ್, ಕೊರೊನಾ ಸೋಂಕಿಗೆ ತುತ್ತಾಗಿರುವ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಶೀಘ್ರ ಚೇತರಿಸಿಕೊಳ್ಳಲೆಂದು ಗ್ರಾಮದ ಇಂಡಿ ಮಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
ಡಾ. ಎಂ.ಆರ್.ರವಿ ಮೈಸೂರಿನ ನಿವಾಸಿಯಾಗಿದ್ದರೂ ಅವರ ಮೂಲ ನಮ್ಮ ಊರಾಗಿದೆ. ನಮ್ಮ ಜಿಲ್ಲಾಧಿಕಾರಿಯಾಗಿದ್ದಾರೆ. ಕೊರೊನಾ ಪ್ರಾರಂಭದ ದಿನಗಳಲ್ಲಿ ಜಿಲ್ಲೆಗೆ ಸೋಂಕು ತಗುಲದಂತೆ ಹಗಲು ರಾತ್ರಿ ದುಡಿದಿದ್ದು, ಎರಡನೇ ಅಲೆಯ ಬಗ್ಗೆಯೂ ಕಟ್ಟೆಚ್ಚರ ವಹಿಸಿದ್ದರು. ಅವರು ಆರೋಗ್ಯವಾಗಿದ್ದರೆ ನಮ್ಮ ಜಿಲ್ಲೆಗೆ ಶ್ರೀರಕ್ಷೆಯಾಗಿರುವುದರಿಂದ ಅವರ ಚೇತರಿಕೆಗೆ ಪೂಜೆ ಸಲ್ಲಿಸಿದ್ದೇನೆ ಎಂದರು.