ಚಾಮರಾಜನಗರ: ಹಿಂದೂ ಸಂಪ್ರದಾಯದಲ್ಲಿ ವಿವಿಧ ರೀತಿಯಲ್ಲಿ ದೇವರನ್ನು ಪ್ರಾರ್ಥನೆ ಮಾಡುವ ಪರಿಪಾಠವಿದೆ. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನಾವು ಕಷ್ಟ ಕಾಲದಲ್ಲಿದ್ದಾಗ, ಉತ್ತಮ ಕೆಲಸ, ಆರೋಗ್ಯ, ನೆಮ್ಮದಿ, ಕುಟುಂಬದಲ್ಲಿ ಶಾಂತಿ, ಹಣಕಾಸಿನ ಅಡಚಣೆ ನಿವಾರಣೆ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಭಗವಂತನ ಮೊರೆ ಹೋಗ್ತೀವಿ. ಕೆಲವೊಮ್ಮೆ ಹರಕೆಯನ್ನು ಕಟ್ಟಿಕೊಳ್ತೀವಿ. ಹೀಗೆ ಹರಕೆಯನ್ನು ಕಟ್ಟಿಕೊಂಡ ಭಕ್ತನೊಬ್ಬ ಕೆನಡಾದಿಂದ ಮಾದಪ್ಪನ ಬೆಟ್ಟಕ್ಕೆ ಬಂದು ಗೋವು ಕೊಟ್ಟು ಪೂಜೆ ಸಲ್ಲಿಸಿದ ಘಟನೆ ನಿನ್ನೆ ನಡೆದಿದೆ.
ಹೌದು, ದಕ್ಷಿಣ ಭಾರತದ ಪ್ರಮುಖ ದೇಗುಲಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕೆನಡಾದಿಂದ ಬಂದ ವೆಂಕಟೇಶ್ ಹಾಗೂ ಲಕ್ಷ್ಮಿ ದಂಪತಿ, ಕ್ಷೇತ್ರದಲ್ಲಿನ ಸಾಲೂರು ಮಠಕ್ಕೆ ಹೆಣ್ಣು ಕರುವೊಂದನ್ನು ಕೊಡುಗೆ ಕೊಟ್ಟಿದ್ದಾರೆ. ಅಂದಹಾಗೆ, ವೆಂಕಟೇಶ್ ಮತ್ತು ಲಕ್ಷ್ಮಿ ದಂಪತಿ ಬೆಂಗಳೂರಿನವರಾಗಿದ್ದು, ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ಕಟ್ಟಿಕೊಂಡಿದ್ದ ಹರಕೆಯೊಂದು ಫಲಿಸಿದ ಹಿನ್ನೆಲೆಯಲ್ಲಿ ಗೋವನ್ನು ಮಠಕ್ಕೆ ದಾನ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು: ಲಡ್ಡು ಜೊತೆ ಭಕ್ತನ ಕೈಸೇರಿದ ₹2.9 ಲಕ್ಷ ದುಡ್ಡು
ಮಲೆ ಮಹದೇಶ್ವರ ಬೆಟ್ಟದ ವಿಶೇಷತೆ: ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಒಂದು ಯಾತ್ರಾಸ್ಥಳ. ಇದು ಮೈಸೂರುನಿಂದ ಸುಮಾರು 150 ಕಿ.ಮೀ ಮತ್ತು ಬೆಂಗಳೂರಿನಿಂದ 210 ಕಿ.ಮೀ ದೂರದಲ್ಲಿದೆ. ಶ್ರೀ ಪುರುಷ ಮಹಾದೇಶ್ವರನ ಪ್ರಾಚೀನ ಮತ್ತು ಪವಿತ್ರ ದೇವಾಲಯವಾಗಿದ್ದು, ಅತ್ಯಂತ ಜನಪ್ರಿಯ ಶೈವ ಯಾತ್ರಾ ಕೇಂದ್ರ ಕೂಡ ಹೌದು. ಮತ್ತು ಅತ್ಯಂತ ಶಕ್ತಿಶಾಲಿ ಶಿವ ದೇವಸ್ಥಾನ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು: ಲಡ್ಡು ಜೊತೆ ಭಕ್ತನ ಕೈಸೇರಿದ ₹2.9 ಲಕ್ಷ ದುಡ್ಡು
ಇಲ್ಲಿಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದಿಂದ ಲಕ್ಷಾಂತರ ಯಾತ್ರಿಗಳನ್ನು ಆಗಮಿಸುತ್ತಾರೆ. ದಟ್ಟ ಕಾಡಿನ ಮಧ್ಯೆ ಇರುವ ಈ ದೇವಾಲಯವು ಯಾತ್ರಾರ್ಥಿಗಳನ್ನು ಮಾತ್ರವಲ್ಲದೇ, ಪ್ರಕೃತಿ ಪ್ರಿಯರನ್ನು ಕೂಡ ಆಕರ್ಷಿಸುತ್ತದೆ. ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು 3000 ಅಡಿಗಳ ಎತ್ತರದಲ್ಲಿದೆ.
ಇದನ್ನೂ ಓದಿ: 2.91 ಲಕ್ಷ ಹಣ ಹಿಂತಿರುಗಿಸಿದ ಮಾದಪ್ಪನ ಭಕ್ತ : ಲಾಡು ಜೊತೆ ಹೋಗಿದ್ದ ದುಡ್ಡು ವಾಪಸ್