ಚಾಮರಾಜನಗರ: ಮಕ್ಕಳ ಪೋಷಕರು ಇಂಗ್ಲಿಷ್ ಕಾನ್ವೆಂಟ್ಗಳ ಮೊರೆ ಹೋಗಿದ್ದರಿಂದ ಚಾಮರಾಜನಗರ ಜಿಲ್ಲೆಯ ಸುಮಾರು 84 ವರ್ಷದಷ್ಟು ಹಳೆಯದಾದ ಶಾಲೆಯೊಂದು ಮುಚ್ಚಿದೆ.
ಕೊಳ್ಳೇಗಾಲದ ಅಣತಿ ದೂರದಲ್ಲೇ ಇರುವ ಸಿದ್ದಯ್ಯನಪುರ ಸರ್ಕಾರಿ ಅನುದಾನಿತ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಈ ಶೈಕ್ಷಣಿಕ ವರ್ಷದಿಂದ ಮುಚ್ಚಿದೆ. ಪೋಷಕರು ತಮ್ಮ ಮಕ್ಕಳನ್ನು ಕಾನ್ಬೆಂಟ್ಗಳಿಗೆ ದಾಖಲಿಸಿದ್ದರಿಂದ 84 ವರ್ಷದ ಶಾಲೆ ಮುಚ್ಚಿದ್ದು, ಗ್ರಾಮಸ್ಥರು ಮರುಕ ಪಡುತ್ತಿದ್ದಾರೆ. ಬ್ರದರನ್ ಕ್ರೈಸ್ತ ಮಿಷನರಿ ಸಂಸ್ಥೆ ಈ ಶಾಲೆಯನ್ನು ಪ್ರಾರಂಭಿಸಿತ್ತು. ಬಳಿಕ, ಸರ್ಕಾರಿ ಅನುದಾನಿತ ಶಾಲೆಯಾಗಿ ಮಾರ್ಪಟ್ಟಿತ್ತು.
ಹಿಂದೆಲ್ಲಾ ಸುಮಾರು 300-400 ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದರು. ನಂತರ ಈ ಸಂಖ್ಯೆ 2016-17ರಲ್ಲಿ 70ಕ್ಕೆ ಇಳಿಯಿತು. 2017-18ರಲ್ಲಿ ಸಂಖ್ಯೆ ಹತ್ತಾಗಿತ್ತು. ಈ ವರ್ಷವೂ ಅದೇ ಮುಂದುವರೆದಿದ್ದರಿಂದ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯನ್ನು ಮುಚ್ಚಬಾರದು ಎಂದು ಈಗ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಆದರೆ, ಕಾನ್ವೆಂಟ್ನಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಗೆ ಸೇರಿಸಲು ಪಾಲಕರು ಮುಂದಾಗುವುದು ಕನಸಿನ ಮಾತೇ ಸರಿ.