ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋನ್ ಕಾಲ್ ಆಡಿಯೋ ಒಂದು ವೈರಲ್ ಆಗಿದೆ.
ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಹರಿದಾಡುತ್ತಿದೆ. ಆಡಿಯೋದಲ್ಲಿ ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿಗೆ ನಗರದ ವೈದ್ಯರೊಬ್ಬರು ಕರೆಮಾಡಿ ಆಕ್ಸಿಜನ್ ಸಿಲಿಂಡರ್ ಕೊಡಿ, ರೋಗಿಗಳು ಎಮರ್ಜೆನ್ಸಿಯಲ್ಲಿದ್ದು ಸತ್ತು ಹೋಗಲಿದ್ದಾರೆ ಎಂದು ಅಳುತ್ತಲೇ ಅಂಗಲಾಚುತ್ತಾರೆ. ಅದಕ್ಕೆ, ಮೈಸೂರು ಡಿಸಿಯಿಂದ ಅನುಮತಿ ಪತ್ರ ಇಲ್ಲವೇ, ಕರೆ ಮಾಡಿಸಿ. ನಾವು ಮೇಡಂ ಕೈಯಲ್ಲಿ ಬೈಸಿಕೊಳ್ಳಲು ಆಗಲ್ಲ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳುತ್ತಾರೆ. ಬಳಿಕ ರೋಹಿಣಿ ಸಿಂಧೂರಿಯವರ ಧ್ವನಿ ಎನ್ನಲಾದ ಆಡಿಯೋವಿದ್ದು, ಗ್ಯಾಸ್ ಏಜೆನ್ಸಿ ಸಿಬ್ಬಂದಿಗೆ ಕರೆಮಾಡಿ, ಚಾಮರಾಜನಗರಕ್ಕೆ ಸಿಲಿಂಡರ್ ಕೊಡಬೇಡಿ, ಮೈಸೂರಿಗೆ ಇಲ್ಲ. ಕೂಡಲೇ ಎಲ್ಎಂಒ ಪ್ಲ್ಯಾಂಟ್ ಫಿಲ್ ಮಾಡಿಸಿ ಎಂದು ಆದೇಶಿಸಿರುವುದು ಇದೆ.
ಸತ್ಯ ಗೊತ್ತು ಎಂದ ಸಿಂಹ : ದುರಂತ ನಡೆದ ಹೊತ್ತಿನಲ್ಲಿ ರೋಹಿಣಿ ಸಿಂಧೂರಿ ಪರವಾಗಿ ಹೇಳಿಕೆ ನೀಡಿದ್ದ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ನಲ್ಲಿ, ಆಕ್ಸಿಜನ್ ಸಿಲಿಂಡರ್ ಕೊಡದಿರಲು ಸಿಂಧೂರಿ ಮೌಖಿಕ ಸೂಚನೆ ನೀಡಿದ್ದರು. ಪದಕಿ ಏಜೆನ್ಸಿಯ ಅನಿಲ್ ಪದಕಿ ಅವರನ್ನು ಕೇಳಿದ್ರೆ ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಯಾಕೆ ಕೊಟ್ಟಿಲ್ಲ ಎಂಬುವುದು ಗೊತ್ತಾಗಲಿದೆ. ಇದೆಲ್ಲ ಸಾಮಾಜಿಕ ಜಾಲತಾಣ ಬಳಸುವವರಿಗೆ ಗೊತ್ತಾಗುವುದಿಲ್ಲ. ಎಲ್ಲೋ ಕುಳಿತುಕೊಂಡು ಸುಮ್ಮನೆ ಯಾರಿಗೋ ಜೈಕಾರ ಹಾಕುತ್ತೀರಾ, ಧಿಕ್ಕಾರ ಹಾಕ್ತೀರಾ. ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವುದು ನಮ್ಮ ಸರ್ಕಾರ. ಡೀನ್, ಡಿಹೆಚ್ಒ ಎಲ್ಲರೂ ನಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮೈಸೂರು, ಚಾಮರಾಜನಗರ, ಮಂಡ್ಯ ಮಧ್ಯೆ ಜಗಳವಾಗುತ್ತೆ ಎಂದು ನಾನು ಅಂದು ಡಿಫೆಂಡ್ ಮಾಡಿಕೊಂಡೆ. ನನಗೆ ಆಕ್ಸಿಜನ್ ದುರಂತದ ಸತ್ಯಾಸತ್ಯತೆ ಗೊತ್ತಿದೆ ಎಂದು ಹೇಳಿದ್ದರು.
ಚಾಮರಾಜನಗರ ಆಕ್ಸಿಜನ್ ದುರಂತ ಸಂಬಂಧ ಹೈಕೋರ್ಟ್ ನೇಮಿಸಿದ ನ್ಯಾಯಮೂರ್ತಿಗಳ ತಂಡದ ಮಧ್ಯಂತರ ವರದಿಯಲ್ಲಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಜೊತೆಗೆ, ಚಾಮರಾಜನಗರ ಡಿಸಿ ವೈಫಲ್ಯ ಎಂದು ತಿಳಿಸಲಾಗಿತ್ತು. ಇದಾದ ಬಳಿಕ, ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರು ಕೂಡ ತನಿಖೆ ನಡೆಸುತ್ತಿದ್ದಾರೆ.