ಚಾಮರಾಜನಗರ: ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದಲೂ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಶ್ರೀ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಮಾಡಿದ್ದಾರೆ.
ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ಮಾಹಿತಿ ನೀಡಿದ್ದು, ಫೆ.19 ರಿಂದ 24ರವರೆಗೂ ಕ್ಷೇತ್ರಕ್ಕೆ 8 ಲಕ್ಷ ಮಂದಿ ಭೇಟಿ ನೀಡಿದ್ದರು. 6 ಲಕ್ಷ ಭಕ್ತಾದಿಗಳು ವಿಶೇಷ ದಾಸೋಹದ ಪ್ರಸಾದ ಸೇವಿಸಿದ್ದಾರೆ. ರಥೋತ್ಸವವಾದ ಇಂದೇ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ರಥೋತ್ಸವ ದಿನ ಇಂದು ಮಧ್ಯಾಹ್ನದವರೆಗೆ 7.10 ಲಕ್ಷ ಲಾಡು ಖರ್ಚಾಗಿವೆ. ಇನ್ನೂ ಒಂದು ಲಕ್ಷ ಲಾಡು ಬಿಕರಿಯಾಗುವ ಸಾಧ್ಯತೆ ಇದೆ. ಈ ಜನಸ್ತೋಮ ನೋಡಿದರೇ 28 ರಂದು ನಡೆಯುವ ಹುಂಡಿ ಎಣಿಕೆಯಲ್ಲಿ ಎರಡು ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎಂದರು.
ತಾಳಬೆಟ್ಟದಿಂದ ಶ್ರೀಕ್ಷೇತ್ರದ ಆವರಣದಲ್ಲಿ ಭಕ್ತರು ಬಿಸಾಡಿರುವ ಪ್ಲಾಸ್ಟಿಕ್ ಬಾಟಲಿ, ತಟ್ಟೆಗಳು, 3 ಲಾರಿಯಷ್ಟು ಚಪ್ಪಲಿಗಳ ವಿಲೇವಾರಿಗೆ 15 ದಿನ ಬೇಕಾಗಬಹುದು. ಹೆಚ್ಚುವರಿ 30 ಮಂದಿ ಪೌರ ಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಶಿವರಾತ್ರಿ ಸಂಭ್ರಮಕ್ಕೆ ಇಂದು ರಾತ್ರಿ ತೆಪ್ಪೋತ್ಸವದ ಮೂಲಕ ತೆರೆ ಬೀಳಲಿದೆ. ಈ ಬಾರಿಯ ಮಹಾಶಿವರಾತ್ರಿ ವಿಜೃಂಭಣೆಯಿಂದ ನೆರವೇರಿದೆ ಎಂದು ಜೈ ವಿಭವಸ್ವಾಮಿ ಹೇಳಿದ್ದಾರೆ.