ಚಾಮರಾಜನಗರ: ನಗರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ದಂಡದ ರುಚಿ ತೋರಿಸಿದ್ದಾರೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕಳೆದ 4 ತಿಂಗಳಿನಲ್ಲಿ ಮಾಸ್ಕ್ ಹಾಕದವರಿಂದ 14 ಸಾವಿರ ರೂ. ದಂಡ ವಸೂಲಿ ಮಾಡಿದ್ದು, ಕಳೆದ ಮೂರು ದಿನಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಛತ್ರ, ಮದ್ಯದಂಗಡಿ ಮಾಲೀಕರು ಸೇರಿದಂತೆ 54 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
51 ಎಫ್ಐಆರ್ನಲ್ಲಿ 47 ಕೇಸ್ಗಳನ್ನು ವಿಪತ್ತು ನಿರ್ವಹಣಾ ಕಾಯ್ದೆಯಡಿ ದಾಖಲಿಸಲಾಗಿದೆ. ಉಳಿದ 4 ಎಪಿಡಮಿಕ್ ಆ್ಯಕ್ಟ್ನಲ್ಲಿ ಕೇಸ್ ರಿಜಿಸ್ಟರ್ ಮಾಡಲಾಗಿದೆ. ಲಾಕ್ಡೌನ್ಗೆ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಯಮ ಮೀರಿ ವರ್ತನೆ ಕಂಡರೆ ವಾಹನಗಳನ್ನು ಜಪ್ತಿ ಮಾಡಿ ಎಫ್ಐಆರ್ ದಾಖಲಿಸಲು ಸೂಚಿಸಿದ್ದೇನೆ ಎಂದರು.
ದಂಡ ಹಾಕಿದ ಡಿವೈಎಸ್ಪಿ: ಚಾಮರಾಜನಗರದ ಷರೀಫ್ ವೃತ್ತದಲ್ಲಿ ಅಸಡ್ಡೆಯಿಂದ ಮಾಸ್ಕ್ ಧರಿಸದೆ ತಿರುಗಾಡುವವರಿಗೆ, ಅನಗತ್ಯವಾಗಿ ಓಡಾಡುತ್ತಿದ್ದವರನ್ನು ಹಿಡಿದು 500 ರೂ. ದಂಡ ವಿಧಿಸಿ, ಅನಗತ್ಯವಾಗಿ ಮತ್ತೊಮ್ಮೆ ಸಂಚರಿಸಿದರೆ ವಾಹನ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಇನ್ನು, ಯೋಜನಾ ನಿರ್ದೇಶಕ ಸುರೇಶ್ ಹಾಗೂ ನಗರಸಭೆ ಆಯುಕ್ತ ಕರಿಬಸವಯ್ಯ ನಗರ ಪ್ರದಕ್ಷಿಣೆ ನಡೆಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮತ್ತು ಮಾಸ್ಕ್ ಧರಿಸುವಂತೆ ಅರಿವು ಮೂಡಿಸಿದರು.