ಸಿಕ್ಕಾಲಿ(ತ.ನಾಡು): ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿರುವ ಇಕ್ಕಲೂರು ದೇಗುಲಕ್ಕೆ ಸಾಗುತ್ತಿದ್ದ ರಾಜ್ಯದ ಯಾತ್ರಿಗಳು ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ನಡೆದಿದೆ.
ಚಾಮರಾಜನಗರದ ಗುಂಡ್ಲುಪೇಟೆಯ 10 ನಿವಾಸಿಗಳು ತಮಿಳುನಾಡಿನ ಗಡಿ ಭಾಗದಲ್ಲಿರುವ ಇಕ್ಕಲೂರು ದೇಗುಲಕ್ಕೆ ತೆರಳುತ್ತಿದ್ದ ವೇಳೆ ಸಿಕ್ಕಾಲಿ ಎಂಬಲ್ಲಿ ಅವರು ಸಾಗುತ್ತಿದ್ದ ಆಟೋ ಅಪಘಾತಕ್ಕೀಡಾಗಿದೆ. ಪರಿಣಾಮ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಕ್ಕಲೂರು ದೇಗುಲಕ್ಕೆ ಹೋಗಲು ನೇರವಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಇಷ್ಟೂ ಮಂದಿ ತಲವಾಡಿವರೆಗೆ ಸರ್ಕಾರಿ ಬಸ್ನಲ್ಲಿ ಬಂದಿದ್ದರು. ಆನಂತರ ಅಲ್ಲಿಂದ ಆಟೋದಲ್ಲಿ ಸಾಗುತ್ತಿದ್ದ ವೇಳೆ ಸಿಕ್ಕಾಲಿ ಎಂಬಲ್ಲಿ ಅಪಘಾತಕ್ಕೊಳಗಾಗಿದೆ. ಘಟನೆಯಲ್ಲಿ ಬೆಳ್ಳಯ್ಯ, ಮಾದೇವಮ್ಮ, ಮಾದೇವಪ್ಪ, ತಾಯಮ್ಮ, ದೊಡ್ಡಮ್ಮ ಗಾಯಗೊಂಡಿದ್ದಾರೆ.
ತಾಳವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.