ಕೊಳ್ಳೇಗಾಲ (ಚಾಮರಾಜನಗರ): ದಿಢೀರ್ ಶ್ರೀಮಂತರಾಗಲು ಎರಡು ಬ್ಯಾಂಕ್ಗಳ ದರೋಡೆಗೆ ಯತ್ನಿಸಿ, ದಾರಿಹೋಕರ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ ಖತರ್ನಾಕ್ ನಾಲ್ವರು ಆರೋಪಿಗಳನ್ನು ಡಿವೈಎಸ್ಪಿ ನಾಗರಾಜು ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್ ಸುಂದರ್ ರಾಜ್ ತಿಳಿಸಿದ್ದಾರೆ.
ಹನೂರಿನ ಸೊಪ್ಪಿನಕೇರಿ ನಿವಾಸಿ ಅಭಿಷೇಕ್ (26), ರಾಚಪ್ಪಾಜಿ ನಗರದ ಮುತ್ತುಸ್ವಾಮಿ (26), ಮಲ್ಲೇಶ್ (27), ಹನೂರು ಟೌನ್ನ ಶ್ರೀನಿವಾಸ್(26) ಬಂಧಿತ ಆರೋಪಿಗಳಾಗಿದ್ದಾರೆ. ಸೆ.3ರಂದು ರಾತ್ರಿ ಕೊಳ್ಳೇಗಾಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸಿದ್ದಯ್ಯನಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಐವರ ಗುಂಪು ಮಾರಕಾಸ್ತ್ರಗಳನ್ನು ಹಿಡಿದು ಒಬ್ಬಂಟಿ ದಾರಿಹೋಕರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿದ ಡಿವೈಎಸ್ಪಿ ನಾಗರಾಜು ತಂಡ ತಡರಾತ್ರಿ ಸ್ಥಳಕ್ಕೆ ತೆರಳಿ ಐವರು ಖದೀಮರ ಸುತ್ತುವರೆದು ದಾಳಿ ನಡೆಸಿದ್ದರು. ಈ ವೇಳೆ 4 ಮಂದಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಓರ್ವ ಪರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಎರಡು ಬ್ಯಾಂಕ್ಗಳ ದರೋಡೆಗೂ ಯತ್ನ
ನಾಲ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಜು.13 ರಾತ್ರಿ ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯ ಎಂಡಿಸಿಸಿ ಬ್ಯಾಂಕ್ ಹಿಂಭಾಗದ ಕಿಟಕಿ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದು. ಅದೇ ರೀತಿ 10 ದಿನದ ಹಿಂದಷ್ಟೆ ಪೊನ್ನಚಿ ಗ್ರಾಮದ ಎಸ್ಬಿಐ ಬ್ಯಾಂಕ್ ಬಾಗಿಲು ಮುರಿದು ಕಳ್ಳತನ ಮಾಡಲು ಪ್ರಯತ್ನ ಮಾಡಿ ಹಣ ಸಿಗದಿದ್ದಾಗ ಕಂಪ್ಯೂಟರ್ ಮಾನಿಟರ್, ಅಂಪ್ಲೀಪೈಯರ್, ಸಿಸಿಟಿವಿ ಡಿವಿಆರ್ ಕದ್ದೊಯ್ದಿದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಎಸ್ಪಿ ತಿಳಿಸಿದ್ದಾರೆ.
ಗಂಭೀರ ಪ್ರಕರಣ ಭೇದಿಸಿದಂತಾಗಿದೆ
ಎರಡು ಬ್ಯಾಂಕ್ಗಳ ದರೋಡೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಗಳ ಹೆಡೆಮುರಿಕಟ್ಟಲು ಎಸ್ಪಿ ದಿವ್ಯಾ ಸಾರಾ ಥಾಮಸ್ ಮಾರ್ಗದರ್ಶನದಂತೆ ಡಿವೈಎಸ್ಪಿ ನಾಗರಾಜು ನೇತೃತ್ವದಲ್ಲಿ ಸಿಪಿಐ ಶಿವರಾಜ್ ಬಿ.ಮುಧೋಳ್, ಸಂತೋಷ್ ಕಶ್ಯಪ್, ಜಿ.ಎನ್.ರಮೇಶ್ ಮತ್ತು ಪಿಎಸ್ಐ ವಿ.ಚೇತನ್ ಹಾಗೂ ವಿ.ಸಿ ಅಶೋಕ ಅವರ ತಂಡ ರಚನೆ ಮಾಡಿ ಕಳ್ಳರ ಪತ್ತೆಗೆ ಮುಂದಾಗಲಾಗಿತ್ತು.
ಆರೋಪಿಗಳನ್ನು ಸೆರೆಹಿಡಿಯಲು ನಿರಂತರ ಪ್ರಯತ್ನ ಮಾಡಿದ್ದ ಪರಿಣಾಮ ಸೆ.3 ರಂದು ಬಂದ ಮಾಹಿತಿ ಆಧರಿಸಿ ಖತರ್ನಾಕ್ ಚಾಲಾಕಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಪ್ರಕರಣ ಭೇದಿಸಿರುವುದರಿಂದ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ ಎಂದಿದ್ದಾರೆ.
ಓದಿ: ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ನಾಲ್ಕು ತಿಂಗಳ ಮಗು ಸೇರಿ ಮೂವರು ದುರ್ಮರಣ