ಚಾಮರಾಜನಗರ: ನಿಮ್ಮ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಳ್ಳು ಹೇಳಿ ವೃದ್ಧೆಯೊಬ್ಬರಿಂದ ಅಪರಿಚಿತರು ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದ ಪುಟ್ಟಮ್ಮ ಎಂಬವರು 37 ಗ್ರಾಂ ಚಿನ್ನಾಭರಣ ಕಳೆದುಕೊಂಡವರು.
ನಗರದ ಹಳೇ ಅಂಚೆ ಕಚೇರಿ ಬಳಿ ಪುಟ್ಟಮ್ಮ ತರಕಾರಿ ಖರೀದಿಸುತ್ತಿದ್ದ ವೇಳೆ ಅಪರಿಚಿತ ಪುರುಷ ಮತ್ತು ಮಹಿಳೆ ಅವರ ಬಳಿ ಹೋಗಿ, ನಿಮ್ಮ ಮಗಳಿಗೆ ಹುಷಾರಿಲ್ಲ, ಆಕೆ, ನಮ್ಮ ಮಗಳಿರುವ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಗಾಬರಿಗೊಳಿಸಿ ಕರೆದೊಯ್ದಿದ್ದಾರೆ.
ನಂತರ ವೃದ್ಧೆಯನ್ನು ಜ್ಞಾನ ತಪ್ಪಿಸಿ, ಆಕೆಯ ಕೊರಳಿನಲ್ಲಿದ್ದ 25 ಗ್ರಾಂ ಕಾಸಿನ ಸರ, 6 ಗ್ರಾಂ 1 ಜೊತೆ ಓಲೆ ಹಾಗೂ ತಾಳಿ ಸಮೇತ ಬಿಚ್ಚಿಕೊಂಡು, ಆಕೆಯ ಸೀರೆಯ ಸೆರಗಿನಲ್ಲಿ ನಕಲಿ ಕಾಸಿನ ಸರ, ಓಲೆಗಳನ್ನು ಸುತ್ತಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಎಚ್ಚರಗೊಂಡ ಬಳಿಕ ವೃದ್ದೆಗೆ ತಾನು ಮೋಸ ಹೋಗಿರುವುದು ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.