ಚಾಮರಾಜನಗರ: ವೀರಪ್ಪನ್ ಹಿಡಿದೇ ತೀರುತ್ತೇವೆ ಎಂದು ಶಪಥ ಮಾಡಿ ಕಾಡುಗಳ್ಳನ ಹುಟ್ಟಡಗಿಸಲು ತೆರಳಿದ್ದ ಎಸ್ಪಿ ಸೇರಿದಂತೆ 6 ಮಂದಿ ಪೊಲೀಸರು ಹುತಾತ್ಮರಾದ ಮಿಣ್ಯಂ ದಾಳಿ ನಡೆದು ಇಂದಿಗೆ 30 ವರ್ಷಗಳು ಸಂದಿವೆ. ಕಾಡುಗಳ್ಳನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಹನೂರು ತಾಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯ ಮಿಣ್ಯಂ ದಾಳಿ ಘಟನೆಯಲ್ಲಿ ಅಡಗಿ ಕುಳಿತಿದ್ದ ವೀರಪ್ಪನ್ ಏಕಾಏಕಿ ನಡುರಸ್ತೆಯಲ್ಲಿ ಪೊಲೀಸರ ಗುಂಡಿನ ಸುರಿಮಳೆಗೈದಿದ್ದ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತದೆ.
ವೀರಪ್ಪನ್ ಅಟ್ಟಹಾಸ ಎಲ್ಲೆ ಮೀರಿದ್ದ 90ರ ದಶಕದಲ್ಲಿ ಎಸ್ಟಿಎಫ್ನಲ್ಲಿ ಕರ್ತವ್ಯ ನಿರ್ವಹಿಸಲು ಹಿಂಜರಿಯುವಂತಹ ಪರಿಸ್ಥಿತಿ ಇತ್ತು. ಆ ವೇಳೆ ಆತನನ್ನು ಹಿಡಿದೇ ತೀರುತ್ತೇವೆ ಎಂದು ಸಾಹಸತನ ತೋರಿದ್ದ ಎಸ್ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹ್ಮದ್ ವೀರಪ್ಪನ್ ಮೋಸಕ್ಕೆ ಬಲಿಯಾಗಿದ್ದರು. ಈ ದಿನವನ್ನು ಅವತ್ತು ಎಸ್ಟಿಎಫ್ನಲ್ಲಿದ್ದ ಹಲವು ಪೊಲೀಸರು ಈಗಲೂ ನೆನೆಯುತ್ತಾರೆ.
ಏನಿದು ಮೀಣ್ಯಂ ದಾಳಿ?: ಎಸ್ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಪೊಲೀಸರಿಗೆ ಒದಗಿ ಬಂದಿತ್ತು. ಆದರೆ ಆತ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ತನ್ನ ನೆಚ್ಚಿನ ಬಂಟನನ್ನು ಕಳೆದುಕೊಂಡಿದ್ದ ವೀರಪ್ಪನ್ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.
ಹಠಕ್ಕೆ ಬಿದ್ದಿದ್ದ ವೀರಪ್ಪನ್, ಕಮಲ ನಾಯ್ಕ ಎಂಬುವವನ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸುತ್ತಾನೆ. ಕಮಲ ನಾಯ್ಕ, ವೀರಪ್ಪನ್ ಮತ್ತು ಪೊಲೀಸರಿಗೆ ಮಾಹಿತಿದಾರನಂತೆ ಕೆಲಸ ಮಾಡುತ್ತಾನೆ. ವ್ಯಾಪಾರಿಗಳ ಸೋಗಿನಲ್ಲಿ ಕಾಡುಗಳ್ಳನನ್ನು ಹಿಡಿಯಲು ಹೊರಟ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಮಿಣ್ಯಂ ಬಳಿ ವೀರಪ್ಪನ್ ಹೊಂಚುಹಾಕಿ ಗುಂಡಿನ ದಾಳಿ ನಡೆಸುತ್ತಾನೆ. ಘಟನೆಯಲ್ಲಿ ಅಪ್ಪಚ್ಚು, ಸುಂದರ್, ಕಾಳಪ್ಪ ಸೇರಿದಂತೆ ಕಮಲನಾಯ್ಕನೂ ಮೃತಪಡುತ್ತಾನೆ. ದಾಳಿಯಲ್ಲಿ ಕೆಲ ಪೊಲೀಸರು ಗಾಯಗೊಳ್ಳುತ್ತಾರೆ.
ಬುಲೆಟ್ ದಾಳಿಗೊಳಗಾದರೂ ಬದುಕಿದ್ದ ಸಿದ್ದರಾಜನಾಯಕ: ಮಿಣ್ಯಂ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಜನಾಯಕ ಎಂಬ ಪೊಲೀಸ್ ಅಧಿಕಾರಿ ಕಳೆದ ವರ್ಷ ಅಸುನೀಗಿದ್ದಾರೆ. ಸಿದ್ದರಾಜನಾಯಕ ಅವರ ತಲೆ ಹಾಗೂ ಕಣ್ಣಿಗೆ ಬುಲೆಟ್ ಹೊಕ್ಕಿತ್ತು. ಅದನ್ನು ದೇಹದಿಂದ ತೆಗೆದರೇ ಅಪಾಯ ಎಂದು ಹಾಗೇ ಬಿಟ್ಟಿದ್ದರು. ತಲೆ, ಕಣ್ಣಲ್ಲಿ ಬುಲೆಟ್ ಇಟ್ಟುಕೊಂಡೇ ಸಿದ್ದರಾಜನಾಯಕ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೇ ಕರ್ತವ್ಯ ನಿರತರಾಗಿರುವಾಗಲೇ ಪಿಎಸ್ಐ ಸಿದ್ದರಾಜನಾಯಕ ಅಸುನೀಗಿದ್ದಾರೆ. ಸಿದ್ದರಾಜನಾಯಕ ಬದುಕಿದಷ್ಟು ದಿನವೂ ಮಿಣ್ಯಂ ದಾಳಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು. ಶಕೀಲ್ ಅಹಮದ್ ಅದೆಷ್ಟರ ಮಟ್ಟಿಗೆ ಆತನನ್ನು ಹಿಡಿಯಲು ಹೇಗೆ ಪಣ ತೊಟ್ಟಿದ್ದರು, ದಿನಗಟ್ಟಲೆ ಹೇಗೆ ಯೋಜನೆ ರೂಪಿಸುತ್ತಿದ್ದರು ಎಂಬುದನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದರು.
ಇಲ್ಲಿನ ಪೊಲೀಸರಿಗೆ ಸ್ವಾತಂತ್ರ್ಯದ ಸಂಭ್ರಮಾಚರಣೆಯ ಹಿಂದಿನ ದಿನ ಕರಾಳದಿನವಾಗಿದೆ. ದಕ್ಷ, ಸಾಹಸಿ ಪೊಲೀಸ್ ಅಧಿಕಾರಿಗಳನ್ನು ಕಳೆದುಕೊಂಡ ಘಟನೆ ಇಂದಿಗೂ ಮಾಸದೇ ಕಣ್ಣೀರು ತರಿಸುತ್ತದೆ.
ಇದನ್ನೂ ಓದಿ : ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಗೋಲಗುಮ್ಮಟ, ಆಲಮಟ್ಟಿ ಜಲಾಶಯ