ಚಾಮರಾಜನಗರ : 7 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಅದೇಶ ಹೊರಡಿಸಿದೆ. ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರ ಸತೀಶ್ (24) ಶಿಕ್ಷೆಗೊಳಗಾದ ಅಪರಾಧಿ. 7 ವರ್ಷದ ಬಾಲಕಿ ಮೇಲೆ ಈತ ಅತ್ಯಾಚಾರ ಎಸಗಿದ್ದಲ್ಲದೇ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣವು ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಘಟನೆ ಹಿನ್ನೆಲೆ : ಅಂಗಡಿಗೆ ತೆರಳಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಆರೋಪಿ ಸತೀಶ್ ಅತ್ಯಾಚಾರ ಎಸಗಿದ್ದನು. ಬಳಿಕ ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ 2021 ರಂದು ಪ್ರಕರಣ ದಾಖಲಾಗಿತ್ತು. ವಾದ ಪ್ರತಿವಾದ ಆಲಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥನಿಗೆ ನ್ಯಾ. ಎ.ಸಿ. ನಿಶಾರಾಣಿ ಅವರು 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 2 ಲಕ್ಷ ಪರಿಹಾರವನ್ನು 30 ದಿನದೊಳಗೆ ಕೊಡಬೇಕೆಂದು ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ವಕೀಲರಾದ ಕೆ. ಯೋಗೇಶ್ ಅವರು ವಾದ ಮಂಡಿಸಿದ್ದರು.
ತನ್ನ ಅತ್ತೆ ಮಗಳ ಮೇಲೆಯೇ ಅತ್ಯಾಚಾರ, ಆರೋಪಿಗೆ 30 ವರ್ಷ ಶಿಕ್ಷೆ : ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮವೊಂದರ ಮಲ್ಲೇಶ್ ಎಂಬಾತ ಬಾಲಕಿ ಮೇಲೆ ಕಳೆದು ವರ್ಷ ಅತ್ಯಾಚಾರವೆಸಗಿದ್ದ. ಇದೀಗ ಆರೋಪ ಸಾಬೀತಾಗಿದ್ದು, ಆರೋಪಿಗೆ ಪೋಕ್ಸೋ ವಿಶೆಷ ನ್ಯಾಯಾಲಯವು 1ಲಕ್ಷ ರೂ. ದಂಡ ಮತ್ತು 30 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಕೊರಾನಾ ಲಾಕ್ಡೌನ್ ಸಂದರ್ಭದಲ್ಲಿ ಶಾಲೆಗೆ ರಜಾ ಇದ್ದ ಕಾರಣ ತನ್ನ ತಂಗಿ ಮಗಳು 9ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಮಾವ ತನ್ನ ಮನೆಗೆ ಕರೆದುಕೊಂಡು ಬಂದಿದ್ದ.
2020 ರ ಜೂನ್ ನಿಂದ ಡಿಸೆಂಬರ್ ತಿಂಗಳ ವರೆಗೂ ಮನೆಯಲ್ಲಿದ್ದ ಬಾಲಕಿಯ ಮಾವನ ಮಗ ಆರೋಪಿ ಮಲ್ಲೇಶ್ನು ತನ್ನ ತಂದೆ ತಾಯಿ ಇಬ್ಬರು ಜಮೀನಿಗೆ ಕೆಲಸಕ್ಕೆ ಹೋದಂತಹ ಸಂದರ್ಭದಲ್ಲಿ ಮನೆಯಲ್ಲೇ ಆಕೆಯ ಮೇಲೆ 7 ರಿಂದ 8 ಬಾರಿ ಅತ್ಯಾಚಾರ ಎಸದಿದ್ದ. ಬಳಿಕ ಯಾರಿಗಾದರೂ ನಡೆದ ಘಟನೆಯನ್ನು ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆಯೊಡಿದ್ದ.
ಬೆದರಿಯಿಂದ ಭಯಗೊಂಡು ಯಾರಿಗೂ ಹೇಳದ ಬಾಲಕಿಯೂ ಈ ದುಷ್ಕೃತ್ಯದಿಂದ ಗರ್ಭಿಣೆಯಾಗಿ 2021 ಮಾರ್ಚ್ 17 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇನ್ನು ಈ ಸಂಬಂಧವಾಗಿ ಪ್ರಕರಣ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ ಖಮ್ರೋಜ್ ಅವರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ : ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ 30 ವರ್ಷಗಳ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ