ಗುಂಡ್ಲುಪೇಟೆ: ಜಾನುವಾರಗಳನ್ನು ಘಾಸಿಗೊಳಿಸಿ ಜನರಲ್ಲಿ ಜೀವಭಯ ಹುಟ್ಟಿಸಿದ್ದ ಚಿರತೆಯನ್ನು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.
ಚಿರತೆಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು. ಅದರಂತೆ ಎರಡು ದಿನಗಳ ಹಿಂದೆ ಇಲಾಖೆಯ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಇಂದು ಬೆಳಗ್ಗೆ 5ರ ಸುಮಾರಿಗೆ 2 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ಸೆರೆಯಾದ ಚಿರತೆಯನ್ನು ಬಂಡೀಪುರ ವಲಯದ ಹೊಸಕೆರೆಕಟ್ಟೆ ಬಳಿ ಬಿಡಲಾಗಿದೆ ಎಂದು ಅರಣ್ಯಾಧಿಕಾರಿ ಲೋಕೇಶ್ ತಿಳಿಸಿದರು. ಕಳೆದ ವಾರ ಒಂದು ಹೆಣ್ಣು ಚಿರತೆಯನ್ನು ಇದೇ ಸ್ಥಳದಲ್ಲಿ ಸೆರೆ ಹಿಡಿದು ಮೂಲೆಹೊಳೆ ಪ್ರದೇಶದಲ್ಲಿ ಬಿಡಲಾಗಿತ್ತು.