ಚಾಮರಾಜನಗರ: ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರವು ಬರೋಬ್ಬರಿ 186 ಮಂದಿಯನ್ನು ನೌಕರಿಯಿಂದ ವಜಾಗೊಳಿಸಿದ್ದು, ಸಿಬ್ಬಂದಿ ಅತಂತ್ರರಾಗಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯದರ್ಶಿ ಜಯವಿಭವಸ್ವಾಮಿ ಗುತ್ತಿಗೆ ನೌಕರರು, ಸಂಚಿತ ವೇತನಾಧಾರಿತ, ಅನುಕಂಪ ಆಧಾರಿತ ನೌಕರರನ್ನ ಮೌಖಿಕವಾಗಿ ಆದೇಶವಿತ್ತು, ಕೆಲಸದಿಂದ ತೆಗೆದುಹಾಕಲಾಗಿದೆ. ಇದರಿಂದ ಸಿಬ್ಬಂದಿಯು ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಾಲೂರು ಮಠದಲ್ಲಿ ಇಂದು ವಜಾಗೊಂಡ ಸಿಬ್ಬಂದಿ ಸಭೆ ನಡೆಸಿ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳನ್ನು ನೀಡದೇ, ಪ್ರಾಧಿಕಾರದ ವಿರುದ್ಧ ಧ್ವನಿ ಎತ್ತುವ ನೌಕರರನ್ನು ಈ ಮೂಲಕ ಬಗ್ಗು ಬಡಿಯುತ್ತಿದೆ ಎಂದು ಕಿಡಿಕಾರಿದ್ದಾರೆ.
10-15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನೌಕರನ್ನು ಬೀದಿಗೆ ಬಿಟ್ಟಿದ್ದಾರೆ. ಪೌರಕಾರ್ಮಿಕರು, ತೋಟಗಾರಿಕೆ, ದಾಸೋಹ ಭವನ,ಲಾಡು ವಿಭಾಗ, ಬಸ್ ವಿಭಾಗ, ಉತ್ಸವ ವಿಭಾಗದ ನೌಕರರು ಈಗ ಅತಂತ್ರರಾಗಿದ್ದು, ಇದಕ್ಕೆಲ್ಲಾ ಜಯವಿಭವಸ್ವಾಮಿ ಅವರೇ ಕಾರಣವೆಂದು ನೌಕರರು ದೂರಿದ್ದಾರೆ.
ಈ ಮಾಸಾಂತ್ಯದವರೆಗೆ ಸರ್ಕಾರದ ಆದೇಶದಂತೆ ನೌಕರರಿಗೆ ಬರಬೇಕಾದ ಸೌಲಭ್ಯಗಳನ್ನು ಒದಗಿಸಿ, ಪುನರ್ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಲು ಪ್ರಾಧಿಕಾರದ ವಿರುದ್ದ ಪ್ರತಿಭಟನೆ ನಡೆಸಲು ಸಭೆಯಲ್ಲಿ ನೌಕರರು ನಿರ್ಣಯ ಕೈಗೊಂಡಿದ್ದಾರೆ.