ಚಾಮರಾಜನಗರ: ಗ್ರಾಮೀಣ ಭಾಗದಲ್ಲೇ ಹೆಚ್ಚು ಕೊರೊನಾ ವ್ಯಾಪಿಸುತ್ತಿರುವ ನಡುವೆ ಹರ್ಷದಾಯಕ ಬೆಳವಣಿಗೆ ಎಂದರೆ ಗುರುವಾರದ ಅಂಕಿ-ಅಂಶಗಳ ಪ್ರಕಾರ ಚಾಮರಾಜನಗರ ಜಿಲ್ಲೆಯ 174 ಹಳ್ಳಿಗಳು ಕೊರೊನಾ ಮುಕ್ತವಾಗಿವೆ.
ಜಿಲ್ಲೆಯ ಒಟ್ಟು 174 ಹಳ್ಳಿಗಳು ಕೊರೊನಾ ಸೋಂಕಿನಿಂದ ಮುಕ್ತವಾಗಿವೆ. ಇವುಗಳಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿರುವ ಗ್ರಾಮಗಳು ಸೇರಿದಂತೆ, ಇದುವರೆಗೂ ಒಂದೂ ಪ್ರಕರಣಗಳು ದಾಖಲಾಗದ ಹಳ್ಳಿಗಳು ಸೇರಿವೆ.
ಚಾಮರಾಜನಗರ ತಾಲೂಕಿನ 23 ಗ್ರಾಮ ಪಂಚಾಯಿತಿಗಳ 61 ಹಳ್ಳಿಗಳು, ಗುಂಡ್ಲುಪೇಟೆ ತಾಲೂಕಿನ 17 ಗ್ರಾಮ ಪಂಚಾಯಿತಿಗಳ 24 ಹಳ್ಳಿಗಳು, ಕೊಳ್ಳೇಗಾಲ ತಾಲೂಕಿನ 7 ಗ್ರಾಮ ಪಂಚಾಯಿತಿಗಳ 15 ಹಳ್ಳಿಗಳು, ಹನೂರು ತಾಲೂಕಿನ 16 ಗ್ರಾಪಂಗಳ 65 ಹಳ್ಳಿಗಳು ಹಾಗೂ ಯಳಂದೂರು ತಾಲೂಕಿನ 3 ಗ್ರಾಮ ಪಂಚಾಯಿತಿಗಳ 9 ಹಳ್ಳಿಗಳಲ್ಲಿ ಶೂನ್ಯ ಕೊರೊನಾ ಪ್ರಕರಣಗಳಿವೆ ಎಂದು ಚಾಮರಾಜನಗರ ಡಿಸಿ ಡಾ. ಎಂ.ಆರ್.ರವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಕೊರೊನಾ ಮುಕ್ತ ಹಳ್ಳಿಗಳ ಪಟ್ಟಿಯಲ್ಲಿ ಹಾಡಿಗಳು ಸೇರಿದ್ದು, ಬಹುತೇಕ ಗಿರಿಜನರ ಹಾಡಿಗಳು ಕೊರೊನಾ ಗೆದ್ದು ಬೀಗಿವೆ. ಪುಣಜನೂರು ಗ್ರಾಪಂಗೆ ಒಳಪಡುವ ಕಂದಾಯ ಗ್ರಾಮ ಸೇರಿದಂತೆ ಒಟ್ಟು 19 ಹಳ್ಳಿಗಳು ಸದ್ಯ ವೈರಸ್ ಫ್ರೀ ಆಗಿವೆ. ಚಾಮರಾಜನಗರ ತಾಲೂಕು ಹಾಗೂ ಹನೂರು ತಾಲೂಕಿನಲ್ಲೇ ಹೆಚ್ಚು ಕೊರೊನಾ ಮುಕ್ತ ಗ್ರಾಮಗಳಿವೆ.
ಹಳ್ಳಿಗಳಲ್ಲಿ ಕೊರೊನಾ ತಡೆಗೆ ಕೋವಿಡ್ ಕ್ಯಾಪ್ಟನ್, ಹೋಂ ಐಸೋಲೇಷನ್ ರದ್ದು, ಕೊರೊನಾ ಲಕ್ಷಣಗಳಿರುವ ರೋಗಿಗಳಿಗೆ ಕೋವಿಡ್ ಟೆಸ್ಟ್ ಮುಂತಾದ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 'ನಿರ್ಭಯಾ' ರೀತಿಯ ಲೈಂಗಿಕ ದೌರ್ಜನ್ಯ ಕೇಸ್: ಪರಾರಿಗೆ ಯತ್ನಿಸಿದ ಆರೋಪಿಗಳಿಗೆ ಗುಂಡು