ಚಾಮರಾಜನಗರ: ಆರ್ಬಿಐ ಎಷ್ಟೇ ಸ್ಪಷ್ಟನೆ ನೀಡಿದ್ದರೂ ೧೦ ರೂ. ನಾಣ್ಯಕ್ಕೆ ಶುಕ್ರದೆಸೆ ಒದಗಿದಂತೆ ಕಾಣುತ್ತಿಲ್ಲ ಎಂಬುದಕ್ಕೇ ಈ ಘಟನೆಯೇ ನಿದರ್ಶನ.
ಹೌದು, ಕೊಳ್ಳೇಗಾಲದಿಂದ ತೆರಳುತ್ತಿದ್ದ ಕೆಎ-೪೨ ಎಫ್-೨೧೮೦ ಬಸ್ನ ಕಂಡಕ್ಟರ್ ೧೦ ರೂ. ನಾಣ್ಯ ಪಡೆಯಲು ನಿರಾಕರಿಸಿದ್ದು, ದೇಶದಲ್ಲೇ ೧೦ ರೂ. ನಾಣ್ಯ ಬ್ಯಾನ್ ಮಾಡಿದ್ದಾರೆಂದು ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ. ಈ ವೇಳೆ ಡಿಪೋದಲ್ಲಿ ೧೦ ರೂ. ನಾಣ್ಯವನ್ನು ಪಡೆಯುತ್ತಿಲ್ಲ, ನಾನು ಲಾಸ್ ಮಾಡಿಕೊಳ್ಳಲೇ ಎಂಬ ಅಸಹಾಯತೆ ತೋರ್ಪಡಿಸಿದ್ದಾರೆ. ನಾಣ್ಯ ಪಡೆದು ಟಿಕೆಟ್ ನೀಡಬೇಕೆಂದು ಸಹ ಪ್ರಯಾಣಿಕರು ಎಷ್ಟೇ ಒತ್ತಾಯ ಮಾಡಿದರೂ ಹಣ ಪಡೆಯದೇ ಬ್ಯಾನ್ ಆಗಿದೆ ಎಂದಿರುವ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಈ ಕುರಿತು ಈಟಿವಿಯೊಂದಿಗೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾತನಾಡಿ, ಕೆಲವೊಮ್ಮೆ ಬ್ಯಾಂಕ್ಗಳು ಕೂಡ ೧೦ ರೂ. ನಾಣ್ಯಗಳನ್ನು ಪಡೆಯಲು ನಿರಾಕರಿಸುತ್ತವೆ. ಆದ್ದರಿಂದ ಡಿಪೋದವರು ನಾಣ್ಯಗಳನ್ನು ಪಡೆಯುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಜಿಲ್ಲಾ ಕೆಎಸ್ಆರ್ಟಿಸಿಯಲ್ಲಿ ೧೦ ರೂ. ನಾಣ್ಯಕ್ಕೆ ಅಘೋಷಿತ ನಿಷೇಧವಿದ್ದು ಸಂಬಂಧ ಪಟ್ಟವರು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕಿದೆ. ಆರ್ಬಿಐ ಠಂಕಿಸಿರುವ ನಾಣ್ಯವನ್ನು ಸರ್ಕಾರಿ ಸಂಸ್ಥೆಗಳೇ ಪಡೆಯಲು ಹಿಂದೇಟು ಹಾಕಿದರೇ ಸಾಮಾನ್ಯರಿಗೆ ಅರಿವು ಮೂಡಿಸುವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.