ಬೆಂಗಳೂರು: ಉತ್ತರ ಲೋಕಸಭೆ ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಇಂದು ಮಹತ್ವದ ಸಭೆ ನಡೆಯಿತು.
ದೇವೇಗೌಡರ ಜೊತೆ ಸಚಿವ ಜಮೀರ್ ಅಹಮ್ಮದ್ ಖಾನ್ ಚರ್ಚೆ ನಡೆಸಿದ್ದು, ತುಮಕೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೌಡರು ಸ್ಪರ್ಧಿಸಿದರೆ ಅನುಕೂಲವಾಗಲಿದೆಯೇ ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಕಾಂಗ್ರೆಸ್ ಮುಖಂಡ ಜಿ.ಎ.ಬಾವಾ ಭಾಗವಹಿಸಿದ್ದರು.
ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೇವೆ. ದೇವೇಗೌಡರೇ ನಮ್ಮ ಅಭ್ಯರ್ಥಿ. ದೇವೇಗೌಡರು ಬೇರೆ ಬೇರೆ ಕಡೆಯಿಂದ ಸ್ಪರ್ಧೆ ಮಾಡಲು ಒತ್ತಡ ಇದೆ. ಆದರೆ ಉತ್ತರದಿಂದ ದೇವೇಗೌಡರು ಸ್ಪರ್ಧೆ ಮಾಡಿದರೆ ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಕ್ಷೇತ್ರದ ನಮ್ಮ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ ಹಾಗೂ ಗೌಡರು 3 ಲಕ್ಷ ಲೀಡ್ನಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿ ನೀವೇ ವಹಿಸಿಕೊಳ್ತೀರಾ ಅನ್ನುವ ಪ್ರಶ್ನೆ ಉತ್ತರಿಸಿದ ಜಮೀರ್, ನಾನು ಸೇರಿದಂತೆ ಬೆಂಗಳೂರು ಉತ್ತರ ಕ್ಷೇತ್ರದ ಶಾಸಕರು, ಕಾರ್ಯಕರ್ತರು ಗೌಡರ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.