ಬೆಂಗಳೂರು: ಚಿಕುನ್ ಗುನ್ಯಾ, ಹಕ್ಕಿ ಜ್ವರ, ಹಂದಿ ಜ್ವರ ಸೇರಿದಂತೆ ನಾನಾ ಜ್ವರ ಬಂತು ಹೋಯಿತು. ಈಗ ಕಾಗೆ ಜ್ವರದ ಸರದಿ ಬಂದಿರುವುದರಿಂದ ಆರೋಗ್ಯ ಇಲಾಖೆ ಎಲ್ಲೆಡೆ ಹೈ ಆರ್ಲಟ್ ಘೋಷಣೆ ಮಾಡಿದೆ.
ಹೌದು, ಮಾರಣಾಂತಿಕ ರೋಗವೆನಿಸಿರುವ ವೆಸ್ಟ್ ನೈಲ್ ವೈರಸ್ ಅಂದರೆ ಕಾಗೆ ಜ್ವರ. ಪಕ್ಕದ ರಾಜ್ಯವಾದ ಕೇರಳದಲ್ಲಿ ಕಾಣಿಸಿಕೊಂಡಿದ್ದು, ಈಗ ನಮ್ಮ ರಾಜ್ಯದಲ್ಲಿಯೂ ಕಾಗೆ ಜ್ವರದ ಭೀತಿ ಶುರುವಾಗಿದೆ. ಈ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಕೇರಳ ಗಡಿಯಲ್ಲಿನ ರಾಜ್ಯದ ನಾಲ್ಕು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ವೆಸ್ಟ್ ನೈಲ್ ಫೀವರ್, ಕಾಗೆ ಸೇರಿದಂತೆ ಇತರೆ ಚಿಕ್ಕ ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಹೊಂದಿರುವ ಪಕ್ಷಿಯಿಂದ ಮತ್ತೊಂದು ಪಕ್ಷಿಗೆ ಹರಡುತ್ತದೆ. ಮನುಷ್ಯನಿಗೆ ಇದು ಸೊಳ್ಳೆ ಹಾಗೂ ಸೋಂಕಿತ ಪಕ್ಷಿಯ ಕಡಿತದಿಂದ ಹರಡುತ್ತದೆ.
ಕೇರಳ ಗಡಿಯಲ್ಲಿರುವ ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡದಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸ್ಥಳೀಯ ಜಿಲ್ಲಾಸ್ಪತ್ರೆಗಳಿಗೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಈಗಾಗಲೇ ಕಾಗೆ ಜ್ವರದ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ.
ಈ ಜ್ವರಕ್ಕೆ ಈಗಾಗಲೇ ಕೇರಳದಲ್ಲಿ ಆರು ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ರೋಗ ರಾಜ್ಯಕ್ಕೂ ಹರಡುವ ಭೀತಿಯಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಈ ಭೀತಿ ಹೆಚ್ಚಿದೆ. ಏಕೆಂದರೆ, ಮಲಪ್ಪುರಂ ಜಿಲ್ಲೆಯು ಕರ್ನಾಟಕದ ಗಡಿಭಾಗದಿಂದ ಕೇವಲ 150 ಕಿ.ಮೀ. ದೂರದಲ್ಲಿದೆ. ಈ ವೈರಾಣು ಕಾಗೆ ಸೇರಿದಂತೆ ಪಕ್ಷಿಗಳಿಂದ ಹರಡುವುದರಿಂದ ವಲಸೆ ಪಕ್ಷಿಗಳ ಮೂಲಕ ರಾಜ್ಯಕ್ಕೂ ಹರಡಬಹುದು. ಹೀಗಾಗಿ ಪಕ್ಷಿಧಾಮಗಳು, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಗಾವಲು ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ವೈದ್ಯಾಧಿಕಾರಿ ಸಜ್ಜನ್ ಶೆಟ್ಟಿ ತಿಳಿಸಿದ್ದಾರೆ.
ಈ ಸೋಂಕು ತಗುಲಿದ ವ್ಯಕ್ತಿಗೆ ಸೋಂಕು ನಿವಾರಣೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಸೋಂಕಿನಿಂದ ಉಂಟಾಗುವ ಜ್ವರ, ತಲೆನೋವು, ನರಗಳ ಊದಿಕೊಳ್ಳುವಿಕೆಯಂತಹ ಸಮಸ್ಯೆಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿ ಹತೋಟಿಗೆ ತರಬೇಕಾಗುತ್ತದೆ. ಹೀಗಾಗಿ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯುವಂತೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ರೋಗ ಹೆಚ್ಚು ಸೊಳ್ಳೆಗಳಿಂದ ಮನುಷ್ಯನಿಗೆ ಹರಡುತ್ತದೆ. ಹೀಗಾಗಿ, ಮನುಷ್ಯರು ಮುನ್ನೆಚ್ಚರಿಕೆ ವಹಿಸುವುದು ಹಾಗೂ ಸೊಳ್ಳೆ ಕಡಿತದಿಂದ ಪಾರಾಗುವುದೇ ಪ್ರಮುಖ ಚಿಕಿತ್ಸೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ಸದ್ಯ ರಾಜ್ಯದಲ್ಲಿ ಈ ರೋಗ ಪತ್ತೆಯಾಗಿಲ್ಲ, ಆರೋಗ್ಯ ಇಲಾಖೆ ಈ ರೋಗವನ್ನ ತಡೆಗಟ್ಟುವ ಬಗ್ಗೆ ಸೂಕ್ತ ಕ್ರಮವನ್ನ ಈಗಾಗಲೆ ತಗೆದುಕೊಳ್ಳುತ್ತಿದ್ದು, ಒಂದು ವೇಳೆ ಈ ರೋಗದ ಲಕ್ಷಣ ಕಂಡ ಬಂದಲ್ಲಿ ತಪ್ಪದೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯವುದು ಅತ್ಯಾವಶ್ಯಕ.