ಬೆಂಗಳೂರು: ಐಎಂಎ ಕಂಪನಿಯಲ್ಲಿ ಹಣ ಕಳೆದುಕೊಂಡು ಒಂದು ಕಡೆ ಗ್ರಾಹಕರು ಕಂಗಲಾಗಿದ್ರೆ, ಮತ್ತೊಂದೆಡೆ ಅವರ ಹಣ ವಾಪಸ್ ಕೊಡ್ತಿವಿ ಎಂದು ಪುಂಗಿ ಬಿಡುವ ಗ್ಯಾಂಗ್ವೊಂದು ಕಾರ್ಯಾಚರಣೆಗೆ ಇಳಿದಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಇರುವ ಸೈಬರ್ ಠಾಣೆಯಲ್ಲಿ ಆನ್ಲೈನ್ ವಂಚನೆ ಕೇಸ್ ದಾಖಲಾಗಿದೆ.
ಐಎಂಎ ವಂಚಿತ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಅವರ ಅಸಹಾಯಕತೆಯನ್ನ ದುರುಪಯೋಗಪಡಿಸಿಕೊಂಡು ಕಳೆದುಕೊಂಡಿರುವ ಹಣವನ್ನು ವರ್ಗಾಯಿಸುವುದಾಗಿ ದೂರವಾಣಿ ಮೂಲಕ ಕರೆ ಮಾಡಿ ಗ್ರಾಹಕರ ಬ್ಯಾಂಕ್ ಖಾತೆ ವಿವರ, ಐಎಫ್ ಎಸ್ ಸಿ ಕೋಡ್, ಡೆಬಿಟ್ ಕಾರ್ಡ್ ಸಂಖ್ಯೆ ಮಾಹಿತಿಯನ್ನ ಕೆಲ ಖದೀಮರು ಕಲೆ ಹಾಕುತ್ತಿದ್ದಾರೆ.
ಈ ವಿಚಾರ ತಿಳಿದ ಪೊಲೀಸರು ಇದೀಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಐಎಂಎ ಗ್ರಾಹಕರು ಯಾವುದೇ ಮೋಸದ ಕರೆಗಳಿಗೆ ತಮ್ಮ ಬ್ಯಾಂಕ್ ಮಾಹಿತಿಯನ್ನ ನೀಡಬೇಡಿ. ಒಂದು ವೇಳೆ ಕರೆ ಬಂದ್ರೆ ಎಚ್ಚರ ವಹಿಸಿ ಠಾಣೆಗೆ ದೂರು ನೀಡಿ ಎಂದಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೂರವಾಣಿ ಕರೆ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.