ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಗೃಹ ಸಚಿವ ಎಂ. ಬಿ. ಪಾಟೀಲ್, ಇಂತಹ ವಂಚನೆ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ತಮಿಳುನಾಡು ಮಾದರಿಯಲ್ಲಿ ವಂಚನೆ ಸಂಸ್ಥೆಗಳ ಆಸ್ತಿ ಜಪ್ತಿ ಮಾಡುವ ಅಧಿಕಾರ ಪೊಲೀಸರಿಗೆ ನೀಡುವ ಸಂಬಂಧ ನಿಯಮಾವಳಿ ರೂಪಿಸಲು ಚಿಂತನೆ ನಡೆದಿದೆ. ಈ ಸಂಬಂಧ ಆರ್ಥಿಕ ಇಲಾಖೆ, ಸಹಕಾರ ಇಲಾಖೆ, ರಿಜಿಸ್ಟ್ರಾರ್ ಆಫ್ ಕಂಪನಿ ಇಲಾಖೆಗಳ ಸಹಯೋಗದಿಂದ ನಿಯಮಾವಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಜತೆ ಸಭೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ತಮಿಳುನಾಡಿನಲ್ಲಿ ಪೊಲೀಸರಿಗೆ ಇಂತಹ ವಂಚನೆ ಸಂಸ್ಥೆಗಳ ಆಸ್ತಿ ಜಪ್ತಿ ಮಾಡುವ ಅಧಿಕಾರವಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ವಂಚನೆ ಸಂಸ್ಥೆಗಳ ಆಸ್ತಿ ಜಪ್ತಿ ಮಾಡುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಲು ಮುಂದಾಗಿದ್ದೇವೆ. ಈಗಾಗಲೇ ಐಎಂಎ ಜ್ಯುವೆಲ್ಲರ್ಸ್ ಸಂಸ್ಥೆಯ ವಂಚನೆ ಪ್ರಕರಣದಂತೆ ಸಿಐಡಿಯಲ್ಲಿ 17, ಸಿಸಿಬಿಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ಇಂತಹ ಪ್ರಕರಣ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ನಿಯಮಾವಳಿಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.
ನಿರಂತರವಾಗಿ ಇಂತಹ ಪ್ರಕರಣ ನಡೆಯುತ್ತಿದೆ. ಆಂಬಿಡೆಂಟ್ ಸೇರಿದಂತೆ ಇಂತಹ ಪ್ರಕರಣ ಸಾಕಷ್ಟು ನಡೆಯುತ್ತಿವೆ. ಇಂತಹ ಕಂಪನಿಗಳಿಗೆ ಪರವಾನಗಿ ಕೊಡೋದು ಬೇರೆ ಇಲಾಖೆ. ದೂರು ಬಂದಾಗ, ವಂಚನೆ ನಡೆದಾಗ ಪೋಲೀಸರು ಪರಿಶೀಲಿಸ್ತಾರೆ. ಈಗ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ತಕ್ಷಣ ಐಎಂಎ ಕಂಪನಿ ಮಾಲೀಕನನ್ನ ಪತ್ತೆಹಚ್ಚಬೇಕಿದೆ. ಆಸ್ತಿಗಳನ್ನು ಗುರುತಿಸುವ ಕೆಲಸ ಆಗುತ್ತಿದೆ. ತನಿಖೆಗೆ ಎಸ್ಐಟಿ ರಚನೆ ಮಾಡಲಾಗುತ್ತಿದೆ. ಜನ ಹೂಡಿಕೆ ಮಾಡಿದ ಹಣ ಅವರಿಗೆ ವಾಪಸ್ ಸಿಗಬೇಕು. ಸಭೆಯಲ್ಲಿ ಈ ಬಗ್ಗೆ ಕೆಲವು ನಿರ್ಧಾರ ಮಾಡಲಾಗಿದೆ. ಅದನ್ನು ಬಹಿರಂಗಪಡಿಸಲ್ಲ. ಇಂತಹ ಕಂಪನಿಗೆ ಪರವಾನಗಿ ಕೊಡುವ ನಿಯಮ ಬದಲಾಗಬೇಕು. ಈ ಬಗ್ಗೆ ಸಿಎಸ್ ಜೊತೆಯೂ ಮಾತನಾಡುತ್ತೇನೆ. ಇಂತಹ ವಂಚನೆ ನಡೆದಾಗ ಕ್ರಮಕ್ಕೆ ಕೆಲವೊಂದು ತೊಡಕು ಎದುರಾಗುತ್ತದೆ. ಹೀಗಾಗಿ ಈ ಬಗ್ಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಿಎಸ್ಗೆ ವಿವರಣೆ ನೀಡಲಿದ್ದಾರೆ. ರಾಜ್ಯದಲ್ಲಿ ಆಗಿರುವ ಎಲ್ಲ ಹಣಕಾಸು ವಂಚನೆ ಪ್ರಕರಣದ ಬಗ್ಗೆ ಸಿಎಸ್ ಜೊತೆ ಚರ್ಚಿಸಲಿದ್ದಾರೆ ಎಂದರು.
ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರೇ ಕೇಳಿ ಬಂದಿದೆ ಎಂಬ ಪ್ರಶ್ನೆಗೆ, ತಪ್ಪಿತಸ್ಥರು ಯಾವ ಪಕ್ಷದವರಾಗಿರಲಿ. ಎಷ್ಟೇ ದೊಡ್ಡವರಿರಲಿ ಕ್ರಮ ನಿಶ್ಚಿತ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.