ಬೆಂಗಳೂರು: ಲೋಕಾಯುಕ್ತ ನ್ಯಾಯಾಲಯ ತಮಗೆ ನಿರೀಕ್ಷಣಾ ಜಾಮೀನು ನಿರಾಕರಿಸಿರುವುದನ್ನ ಪ್ರಶ್ನಿಸಿ ಕೃಷ್ಣಲಾಲ್ ಇದೀಗ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಟಿಡಿಆರ್ ಯೋಜನೆಯಡಿ ರಸ್ತೆ ವಿಸ್ತರಣೆಗೆ ವಶಪಡಿಸಿಕೊಳ್ಳಲಾದ ನಿವೇಶನ ಮತ್ತು ಕಟ್ಟಡಗಳ ಜಾಗಕ್ಕೆ ಹೆಚ್ಚು ಬೆಲೆ ನಿಗದಿಪಡಿಸಿ, ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಏಪ್ರಿಲ್ 27 ರಂದು ಕೃಷ್ಣಲಾಲ್ ಮತ್ತು ಸಹಚರರ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಎಸಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಈ ಮೊದಲು ಆರೋಪಿಗೆ ಜಾಮೀನು ಸಿಕ್ಕರೂ ನಂತರ ಎಸಿಬಿ ಆಕ್ಷೇಪಣೆ ಸಲ್ಲಿಸಿದ ಕಾರಣ, ಕಳೆದ ಮೇ 27 ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಜಾಮೀನು ರದ್ದಿಗೆ ಆದೇಶಿಸಿದ್ದರು. ಇದರಿಂದಾಗಿ ಕೃಷ್ಣಲಾಲ್ ಇದೀಗ ಜಾಮೀನುಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.