ಬೆಂಗಳೂರು: ನೈಸರ್ಗಿಕ ವಿಕೋಪ, ಅಗ್ನಿ ದುರಂತ ಹಾಗೂ ಬಹುಮಹಡಿ ಕುಸಿತದಲ್ಲಿ ಉಂಟಾಗುವ ಪ್ರಾಣಹಾನಿ ತಪ್ಪಿಸಲು ಹಾಗೂ ತ್ವರಿತ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಪ್ರತ್ಯೇಕವಾಗಿ ಹೆಲಿಕಾಪ್ಟರ್ ಗುತ್ತಿಗೆ ಪಡೆಯಲು ಮುಂದಾಗಿದೆ.
ಈಗಾಗಲೇ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಹೆಚ್ಎಎಲ್) ಹಿರಿಯ ಅಧಿಕಾರಿಗಳೊಂದಿಗೆ ಒಂದು ಹೆಲಿಕಾಪ್ಟರ್ ಗುತ್ತಿಗೆ ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಅಂದುಕೊಡಂತೆ ಆದರೆ ಶೀಘ್ರದಲ್ಲೇ ಅಗ್ನಿಶಾಮಕ ಇಲಾಖೆ ಹೆಲಿಕಾಪ್ಟರ್ ಮೂಲಕ ತನ್ನ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ.
ಭವಿಷ್ಯದಲ್ಲಿ ನಡೆಯಬಹುದಾದ ಅಗ್ನಿ ದುರಂತ, ಕಾಡ್ಗಿಚ್ಚು ಸೇರಿದಂತೆ ಮತ್ತಿತರ ನೈಸರ್ಗಿಕ ವಿಕೋಪದ ವೇಳೆ ಪ್ರಾಣಹಾನಿ ನಿಯಂತ್ರಿಸುವುದು ಸವಾಲಿನ ಕೆಲಸ. ವಿಕೋಪ ಸಂಭವಿಸಿದಾಗ ತ್ವರಿತವಾಗಿ ಕಾರ್ಯಾಚರಣೆ ಕೈಗೊಂಡರೂ ಊಹೆಗೆ ನಿಲುಕದ ಅವಘಡ ಸಂಭವಿಸುತ್ತದೆ. ಈ ಹಿಂದೆ ನಡೆದ ಕಹಿ ಘಟನೆಗಳ ಬಗ್ಗೆ ಎಚ್ಚೆತ್ತುಕೊಂಡು ಹೆಲಿಕಾಪ್ಟರ್ ಗುತ್ತಿಗೆ ಪಡೆಯಲು ಇಲಾಖೆ ನಿರ್ಧರಿಸಿದೆ.
ಹೆಲಿಕಾಪ್ಟರ್ ಗುತ್ತಿಗೆ ಪಡೆಯಲು ಕಾರಣಗಳೇನು ?
ಕಳೆದ ಮಾರ್ಚ್ ತಿಂಗಳಲ್ಲಿ ಧಾರವಾಡದಲ್ಲಿ ಸಂಭವಿಸಿದ್ದ ಬಹುಮಹಡಿ ಕಟ್ಟಡ ಕುಸಿತದಲ್ಲಿ 14 ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇನ್ನು 60 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ರೀತಿ ಕಳೆದ ಫೆಬ್ರುವರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿನಿಂದ ಸುಮಾರು 40 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ತ್ವರಿತವಾಗಿ ಅಗ್ನಿ ನಂದಿಸಲು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಎರಡು ಹೆಲಿಕಾಪ್ಟರ್ ವ್ಯವಸ್ಥೆ ಮಾಡುವಂತೆ ರಕ್ಷಣಾ ಇಲಾಖೆಯ ಮೊರೆ ಹೋಗಿದ್ದರು. ಇದರಿಂದ ಪಾಠ ಕಲಿತಿರುವ ಇಲಾಖೆಯು ಮುಂಜಾಗ್ರತ ಕ್ರಮವಾಗಿ ಹೆಲಿಕಾಪ್ಟರ್ ಬಳಸಿಕೊಳ್ಳಲು ಸಜ್ಜಾಗಿದೆ.
ಹೆಲಿಕಾಪ್ಟರ್ನಿಂದಾಗುವ ಉಪಯೋಗಗಳೇನು ?
ಬಹುಮಹಡಿ ಕಟ್ಟಡದಲ್ಲಿ ಅಗ್ನಿಅನಾಹುತ ಸಂಭವಿಸಿದಾಗ ಪ್ರಾಣಹಾನಿ ತಪ್ಪಿಸಲು ಎತ್ತರ ಪ್ರದೇಶದಿಂದ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲು ಸುಲಭವಾಗಲಿದೆ. ಬೇಸಿಗೆಯಲ್ಲಿ ಪಶ್ಚಿಮಘಟ್ಟದಲ್ಲಿ ಸಂಭವಿಸುವ ಕಾಡ್ಗಿಚ್ಚು ಪ್ರಮಾಣ ತಗ್ಗಿಸಲು ಹಾಗೂ ಸೂಕ್ತ ನೀರಿನ ವ್ಯವಸ್ಥೆ ಮಾಡಲು ಸಹಕಾರಿಯಾಗಲಿದೆ. ಆಗಿರುವ ಅಪಾಯ ಪ್ರಮಾಣವನ್ನು ಅಳೆಯಲು ವೈಮಾನಿಕ ಸರ್ವೆ ನಡೆಸಬಹುದಾಗಿದೆ. ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ವ್ಯವಸ್ಥೆಗೆ ಪ್ರತಿ ಬಾರಿ ರಕ್ಷಣಾ ಇಲಾಖೆಯ ಅನುಮತಿ ಪಡೆಯುವ ಅನಿವಾರ್ಯತೆ ತಪ್ಪಲಿದೆ. ಮಳೆಗಾಲದಲ್ಲಿ ಉಂಟಾಗುವ ಪ್ರವಾಹದ ವೈಮಾನಿಕ ಸರ್ವೆ ಹಾಗೂ ತಗ್ಗು ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ಜನರನ್ನು ಸ್ಥಳಾಂತರಿಸುವುದು ಹೀಗೆ ಬಹುಪಯೋಗಿಯಾಗಿ ಹೆಲಿಕಾಪ್ಟರ್ ಬಳಕೆಯಾಗಲಿದೆ ಎನ್ನುವುದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳ ಅಭಿಮತ.
ಈಗಾಗಲೇ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಎರಡು ಬಾರಿ ಹೆಚ್ಎಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಹೆಲಿಕಾಪ್ಟರ್ ಗುತ್ತಿಗೆ ಹಾಗೂ ಅದರ ನಿರ್ವಹಣೆಯ ಖರ್ಚು ವೆಚ್ಚಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. 3 ವರ್ಷಗಳ ಕಾಲ ಗುತ್ತಿಗೆ ಪಡೆಯಲು ಇಲಾಖೆಯು ಚಿಂತಿಸಿದೆ.