ಬೆಂಗಳೂರು: ಬಿಬಿಎಂಪಿಯ ಬಹುಕೋಟಿ ಟಿಡಿಆರ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಇಂದು 15 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.
ನಗರದ ಹಲಸೂರು ಗೇಟ್ ಬಳಿಯ ಬನಶಂಕರಿ ಕೋ ಆಪರೇಟಿವ್ ಬ್ಯಾಂಕ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಟಿಡಿಆರ್ ಹಗರಣ ಸಂಬಂಧ ಈ ಮೊದಲು ಕೃಷ್ಣ ಲಾಲ್ ಹಾಗೂ ಉದ್ಯಮಿ ರತನ್ ಲಾಥ್ ಸೇರಿದಂತೆ ಏಳು ಜನ ಏಜೆಂಟ್ಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ನಂತರ ವಿಚಾರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿ ವಾಲ್ ಮಾರ್ಕ್ ಕಂಪನಿ ಮಾಲೀಕ ರತನ್ ಲಾಥ್ನಿಂದ ಹಣದ ವ್ಯವಹಾರದ ಮಾಹಿತಿ ಕಲೆಹಾಕಿದ್ದರು.
ಎಸಿಬಿ ತನಿಖೆ ವೇಳೆ ಟಿಡಿಆರ್ನ ಕೋಟ್ಯಂತರ ರೂಪಾಯಿ ಅವ್ಯವಹಾರವನ್ನು ಬನಶಂಕರಿ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ನಡೆಸಿರುವ ಮಾಹಿತಿ ಲಭ್ಯವಾಗಿತ್ತು ಎನ್ನಲಾಗ್ತಿದೆ. ಹೀಗಾಗಿ ಬ್ಯಾಂಕ್ ಮೇಲೆ ದಾಳಿ ನಡೆಸಿರುವ ಎಸಿಬಿ, ಎಸ್ಪಿ ಸಂಜೀವ್ ಪಾಟೀಲ್ ಮತ್ತು ಡಿವೈಎಸ್ಪಿ ರವಿಕುಮಾರ್ ನೇತೃತ್ವದ ತಂಡ ಪರಿಶೀಲನೆ ಮುಂದುವರೆಸಿದೆ.