ಬೆಂಗಳೂರು: ರಮೇಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ ಶಾಸಕ ನಾಗೇಂದ್ರ, ಸಿಎಂ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ರಾಮೇಶ್ ಜಾರಕಿಹೊಳಿ ಗುಂಪಿನಲ್ಲಿರುವವರು ರಾಜೀನಾಮೆ ನೀಡುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ಬಿ.ನಾಗೇಂದ್ರ ಅವರ ಮನವೊಲಿಕೆಗೆ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ಹಾಗಾಗಿ ಇಂದು ನಾಗೇಂದ್ರ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಗುರುವಾರವಷ್ಟೇ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ರನ್ನು ಜೆ.ಪಿ. ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಿಎಂ ಮನವೊಲಿಸಿದ್ದರು.
ದ್ವಾರಕನಾಥ್ ಗುರೂಜಿ ಸಹ ಭೇಟಿ:
ಇದೇ ಸಂದರ್ಭದಲ್ಲಿ ದ್ವಾರಕನಾಥ್ ಗುರೂಜಿ ಕೂಡ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ನೀಡುವ ಸಂಬಂಧ ಸರ್ಕಾರ ಈ ಹಿಂದೆ ಆದೇಶ ಮಾಡಿತ್ತು. ಆದರೆ ಇನ್ನೂ ಆ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಸಿಕ್ಕಿದ್ದು, ಗುರೂಜಿ ಬಳಿ ಪೂಜೆ ಪುನಸ್ಕಾರದ ಬಗ್ಗೆ ತಿಳಿದುಕೊಳ್ಳುವ ವೇಳೆ ಈ ವಿಚಾರ ಗಮನಕ್ಕೆ ಬಂದಿದೆ. ಹೀಗಾಗಿ ರಥ ನಿರ್ಮಿಸಿಕೊಡುವ ಸಂಬಂಧ ಮಾತುಕತೆ ನಡೆಸಿದ್ದು, ಸಿಎಂ, ದ್ವಾರಕನಾಥ್ ಗುರೂಜಿಯಿಂದ ಸಲಹೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ರಥ ಯಾವ ರೀತಿ ಇರಬೇಕು, ವಿಧಾನ ಹೇಗಿರಬೇಕು ಎಂಬ ಬಗ್ಗೆ ಗುರೂಜಿ ಅವರ ಬಳಿ ಸಿಎಂ ಮಾಹಿತಿ ಪಡೆದುಕೊಂಡಿದ್ದು, ಅತಿ ಶೀಘ್ರದಲ್ಲಿ ಈ ಕೆಲಸ ಮಾಡುವೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮಂಡ್ಯ ರಾಜಕೀಯ ವಿಚಾರದ ಬಗ್ಗೆಯೂ ಪ್ರಸ್ತಾಪವಾಗಿದ್ದು, ಎಲ್ಲ ಒಳ್ಳೆಯದಾಗುತ್ತದೆ ಎಂದು ದ್ವಾರಕನಾಥ್ ಗುರೂಜಿ ಆಶೀರ್ವಾದ ಮಾಡಿದ್ದಾರೆ ಎನ್ನಲಾಗಿದೆ.