ಬೆಂಗಳೂರು: ಸಿದ್ದರಾಮಯ್ಯ ಅವರನ್ನು ನಾವು ಸಿಎಂ ಎಂದೇ ಕರೆಯುತ್ತೇವೆ. ನಮಗೆ ಸಿದ್ರಾಮಣ್ಣನವರೇ ಸಿಎಂ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು. ಪುಲಿಕೇಶಿನಗರದಲ್ಲಿ ಮೈತ್ರಿ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಸಿದ್ದರಾಮಯ್ಯ ಮೇಲಿನ ಅಭಿಮಾನ ಮೆರೆದರು.
ಇನ್ನು ಸಮಾವೇಶಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿ ಬಳಿಕ ಮಾತನಾಡಿದರು. ದೇವೇಗೌಡರು ಕೊನೆ ಕ್ಷಣದಲ್ಲಿ ತುಮಕೂರಿನಲ್ಲಿ ನಿಲ್ಲುತ್ತೇನೆ. ಇಲ್ಲಿ ಕೃಷ್ಣಬೈರೇಗೌಡರನ್ನು ನಿಲ್ಲಿಸಿ ಎಂದು ತಿಳಿಸಿದರು. ನಂತರ ಕಾಂಗ್ರೆಸ್ ನವರು ಮೀಟಿಂಗ್ ಮಾಡಿ ಕೃಷ್ಣಬೈರೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಇವರು ನನ್ನ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಶುದ್ಧ ಹಸ್ತದ ವ್ಯಕ್ತಿ ಇವರು ಎಂದು ಶ್ಲಾಘಿಸಿದರು.
ಮೋದಿ ಮತ್ತೆ ಅಧಿಕಾರಕ್ಕೆ ಬರಬಾರದು:
ಅಲ್ಪಸಂಖ್ಯಾತರು, ಮಹಿಳೆಯರು, ದುರ್ಬಲರು ಆತಂಕದಿಂದ ಬದುಕುತ್ತಿದ್ದಾರೆ. ಸುರೇಶ್ ಕುಮಾರ್ ಇವತ್ತು ಮೈಸೂರಲ್ಲಿ ಭಾಷಣ ಮಾಡುತ್ತಾ ನಾವೂ ಸಂವಿಧಾನ ಪರ ಇದೀವಿ ಅಂತ ಹೇಳಿದ್ದಾರೆ. ನಿಮ್ಮದೇ ಸಚಿವ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿದೀವಿ ಅಂತಾರಲ್ಲ. ಅವರೇನು ಕಾರ್ಯಕರ್ತರಲ್ಲ ಸ್ವಾಮಿ, ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರಿಗೆ ಏನ್ ಉತ್ತರ ಕೊಡ್ತೀರಾ ಸುರೇಶ ಕುಮಾರ್? ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದಾನಲ್ಲ ಅವನ್ಯಾರೋ ತೇಜಸ್ವಿ ಸೂರ್ಯನನ್ನ ಸೂರ್ಯ ಅಂತ ಕರೀಬಾರದು ಅಮವಾಸ್ಯೆ ಅಂತ ಕರೀಬೇಕು. ಇನ್ನೂ ಕಣ್ಣೇ ಬಿಡದ ತೇಜಸ್ವಿ ಸೂರ್ಯ ಸಂವಿಧಾನ ಸುಟ್ಟು ಹಾಕಿ, ಅಂಬೇಡ್ಕರ್ ಮೂರ್ತಿ ಧ್ವಂಸ ಮಾಡಿ ಅಂತ ಹೇಳ್ತಾನೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಉತ್ತರ ಅಭ್ಯರ್ಥಿ ಕೃಷ್ಣಬೈರೇಗೌಡ ಮಾತನಾಡಿ, ಮೈತ್ರಿ ಅಭ್ಯರ್ಥಿಯಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ. ಸದಾನಂದಗೌಡರು ಈ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರು ಯಾವತ್ತಾದ್ರೂ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರಾ? ನಿಮ್ಮ ಸಮಸ್ಯೆ ಕೇಳಿದ್ದಾರಾ? ಇಲ್ಲಿನ ನಾಯಕರನ್ನ ಭೇಟಿ ಮಾಡಿದ್ದಾರಾ? ಅವರು ಕ್ಷೇತ್ರದ ಬಗ್ಗೆಯಾಗಲಿ ಕರ್ನಾಟಕದ ಬಗ್ಗೆಯಾಗಲಿ ಕೇಂದ್ರದಲ್ಲಿ ಕೆಲಸ ಮಾಡಿಲ್ಲ ಎಂದು ಸದಾನಂದಗೌಡ ವಿರುದ್ದ ವಾಗ್ದಾಳಿ ನಡೆಸಿದರು.
ಸಚಿವ ಜಮೀರ್ ಅಹಮದ್ ಮಾತನಾಡಿ, ಈಶ್ವರಪ್ಪನವರು ನಮಗೆ ಮುಸ್ಲಿಂ ಮತ ಬೇಡ ಎಂದಿದ್ದರು. ಆದರೆ ಸದಾನಂದಗೌಡರು ನಾವು ಮುಸ್ಲಿಂ ಪರ ಇದ್ದೇವೆ. ನಮಗೆ ನಿಮ್ಮ ಓಟು ಬೇಕು ಅಂತಾರೆ. ಮುಸ್ಲಿಂಮರು ಎಂದರೆ ಕಾಂಗ್ರೆಸ್ ಪಕ್ಷ ಎಂದು ಟಾಂಗ್ ನೀಡಿದರು.