ಬೆಂಗಳೂರು : ಸಂಕಷ್ಟದಲ್ಲಿರುವ ದೋಸ್ತಿ ಸರ್ಕಾರ ಕಾಪಾಡಲು ಕಾಂಗ್ರೆಸ್ನ ಎಲ್ಲ 21ಸಚಿವರು ಇಂದು ತಮ್ಮ ಮಂತ್ರಿ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಪಕ್ಷದ 21 ಸಚಿವರು ತಮ್ಮಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಸ್ವತಃ ನಮ್ಮ ಪಕ್ಷದ ಸಚಿವರು ಈ ತೀರ್ಮಾನ ಕೈಗೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಯುತ್ತದೆ, ಮುಂದುವರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿಯ ಕುತಂತ್ರ ತಡೆಯುವ ನಿಟ್ಟಿನಲ್ಲಿ ತಮ್ಮ ಸ್ಥಾನಗಳಿಗೆ ಒಕ್ಕೊರಲಿನಿಂದ ರಾಜೀನಾಮೆ ನೀಡಿದ್ದಾರೆ ಎಂದರು.
ನಮ್ಮದು ಸಮ್ಮಿಶ್ರ ಸರ್ಕಾರವಾದ್ದರಿಂದ ಕಾಂಗ್ರೆಸ್ಗೆ 22 ಮಂತ್ರಿ ಸ್ಥಾನಗಳು ಸಿಕ್ಕಿದ್ದವು. ಇವುಗಳನ್ನು ಎಲ್ಲರಿಗೂ ಹಂಚಲು ಸಾಧ್ಯವಿಲ್ಲ. ಆದರೆ, ಎರಡು ಮೂರು ಹಂತಗಳಲ್ಲಿ ಸಂಪುಟ ವಿಸ್ತರಿಸಿ ಎಲ್ಲರಿಗೂ ಅವಕಾಶ ನೀಡಲು ಯೋಚಿಸಿದ್ದೆವು. ಆದರೆ, ಅಷ್ಟರಲ್ಲೇ ಕೆಲವರು ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಿದ್ದು ಹೇಳಿದರು.
ಇನ್ನು ಮಂತ್ರಿಯಾಗಲಿಲ್ಲ ಎನ್ನುವ ನಿರಾಸೆಯಿಂದ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗಬೇಡಿ. ಬಿಜೆಪಿಯ ಆಸೆ-ಆಮಿಷ್ಯಗಳಿಗೆ ಒಳಗಾಗಬೇಡಿ. ನಾವು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಆತುರದ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಹೇಳಿದ ಅವರು, ಸಂಫುಟ ಪುನರ್ ರಚನೆ ಮಾಡಿ ಅಸಮಾಧಾನ ಇರುವ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಬಹಿರಂಗ ಆಹ್ವಾನ ನೀಡಿದರು.