ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಧಿಕಾರಿ ಎಲ್‌ಸಿ ನಾಗರಾಜ್ ಬಂಧಿಸಿರುವ ಎಸ್ಐಟಿ ಅಧಿಕಾರಿಗಳು, ಅವರ ನೆಲಮಂಗಲ ನಿವಾಸದಲ್ಲಿ ಶೋಧನೆ ನಡೆಸಿದ್ದಾರೆ.
ರಾಜ್ಯದಲ್ಲಿ ಸಂಚಲನ ಮೂಡಿಸಿದ ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, 4.5 ಕೋಟಿ ರೂ. ಲಂಚ ಪಡೆದು ಐಎಂಎ ಕಂಪನಿ ಪರವಾಗಿ ವರದಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಾಗರಾಜ್‌ನನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಎಲ್‌ಸಿ ನಾಗರಾಜ್ ಅವರ ನೆಲಮಂಗಲ ಪರಮಣ್ಣ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಿರುವ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಎಸ್‌ಐಟಿ ತನಿಖಾಧಿಕಾರಿ ಗಿರೀಶ್ ಹಾಗೂ ಐದು ಜನರ ತಂಡದಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ತಡರಾತ್ರಿಯವರೆಗೂ ಎಸ್ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದರು.
ಘಟನೆ ಹಿನ್ನೆಲೆ...
ಐಎಂಎ ಕಂಪನಿಯ ಬಗ್ಗೆ ತನಿಖೆ ನಡೆಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) 7 ತಿಂಗಳ ಹಿಂದೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆರ್‌ಬಿಐ ಸೂಚನೆಯಂತೆ ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರಿಯನ್ನಾಗಿ ನಾಗರಾಜ್ ಅವರನ್ನು ನೇಮಿಸಿತ್ತು. ಆದರೆ ನಾಗರಾಜ್, 4.5 ಕೋಟಿ ರೂ. ಹಣ ಲಂಚ ಪಡೆದು ಸರಿಯಾಗಿ ತನಿಖೆ ಮಾಡದೆ ಮನ್ಸೂರ್ ಅಲಿಖಾನ್‌ಗೆ ಲಾಭವಾಗುವ ರೀತಿಯಲ್ಲಿ ತನಿಖೆ ನಡೆಸಿ, ಯಾವುದೇ ಲೋಪ ಆಗಿಲ್ಲ ಎಂದು ಐಎಂಎ ಕಂಪನಿ ಪರವಾಗಿ ಸರ್ಕಾರಕ್ಕೆ ವರದಿ ನೀಡಿ ಪ್ರಕರಣ ಮುಚ್ಚಿ ಹಾಕಿದರು ಎನ್ನಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತ ಹುದ್ದೆಗೆ ನಿಯೋಜನೆಯಾಗಿದ್ದರೂ ಸಹ ಅಲ್ಲಿ ನಾಗರಾಜ್ ಅಧಿಕಾರ ವಹಿಸಿಕೊಳ್ಳಲಿಲ್ಲ ಎನ್ನಲಾಗಿದೆ. ಸುಗ್ರೀವಾಜ್ಞೆ ಮೂಲಕ ಲಾಭಿ ಮಾಡಿ ಕಂದಾಯ ಇಲಾಖೆಯಲ್ಲೇ ಉಳಿಯಲು ನಾಗರಾಜ್ ನಿರ್ಧರಿಸಿದ್ದರು. ನಾಗರಾಜ್ಆ್ಯಂಬಿಡೆಂಟ್ ಹಗರಣ ಸೇರಿದಂತೆ ಇನ್ನೂ ಹಲವು ಕಂಪನಿಗಳ ಅಕ್ರಮದ ತನಿಖೆ ಮಾಡಲು ನೇಮಕವಾಗಿದ್ದರು.