ಬೆಂಗಳೂರು: ಸಫಾಯಿ ಕರ್ಮಾಚಾರಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾದ ಆಯೋಗ, ನಿಗಮಗಳು ಕೈಕಟ್ಟಿ ಕುಳಿತಿವೆ. ಕೇಂದ್ರ ಸರ್ಕಾರದ ಸಫಾಯಿ ಕರ್ಮಾಚಾರಿ ಆಯೋಗ ಕೊಡುವ ಅನುದಾನವನ್ನೂ ತಿರಸ್ಕರಿಸಿ, ರಾಜ್ಯದಲ್ಲೂ ಅನುದಾನ ಬಳಸಿಕೊಳ್ಳದೆ ಅನ್ಯಾಯ ಮಾಡಲಾಗ್ತಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಾಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಆರೋಪಿಸಿದರು.
ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮ ರಚನೆಗೊಂಡು ಮೂರು ವರ್ಷಗಳಾದರೂ ಅಧ್ಯಕ್ಷರನ್ನು ನೇಮಿಸಿಲ್ಲ. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಸರ್ಕಾರವೂ ಕ್ರಮ ಕೈಗೊಳ್ಳುತ್ತಿಲ್ಲ. ಸಫಾಯಿ ಕರ್ಮಾಚಾರಿಗಳಿಗೆ ಇದುವರೆಗೂ ಒಂದು ರುಪಾಯಿ ಕೂಡ ಸಾಲ ಮಂಜೂರು ಮಾಡಿಲ್ಲ ಎಂದು ರಾಜ್ಯ ನಿಗಮದ ಕಾರ್ಯವೈಖರಿ ಕುರಿತು ಜಗದೀಶ್ ಹಿರೇಮನಿ ಅಸಮಾಧಾನ ಹೊರಹಾಕಿದರು.
ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ಸಫಾಯಿ ಕರ್ಮಾಚಾರಿಗಳ ಸ್ಥಿತಿಗತಿ, ಈ ಹಿಂದಿನ ಸಭೆಗಳಲ್ಲಿ ಚರ್ಚಿಸಿದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೇಂದ್ರ ಸರ್ಕಾರದ ಅನುದಾನದ ಮೂಲಕ, ಕರ್ಮಾಚಾರಿಗಳಿಗೆ ನೇರವಾಗಿ ಬ್ಯಾಂಕ್ (ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್) ಮೂಲಕ ಸಾಲ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ದೆಹಲಿಯಲ್ಲಿ ಆಯೋಗದಿಂದ ಸಫಾಯಿ ಕರ್ಮಾಚಾರಿಗಳಿಗೆ ಸಬ್ಸಿಡಿ ಆಧಾರದಲ್ಲಿ 3 ಲಕ್ಷ ರೂ ವೆಚ್ಚದ 200 ಸಕ್ಕಿಂಗ್ ಯಂತ್ರಗಳನ್ನು ನೀಡಲಾಗಿದೆ. ಹಾಗೆಯೇ ರಾಜ್ಯದಲ್ಲೂ ಜಲಮಂಡಳಿಗೆ 30 ಯಂತ್ರಗಳ ಖರೀದಿಸುವ ಯೋಜನೆಯಿದೆ. ಅಲ್ಲದೆ ಬಿಬಿಎಂಪಿಯ ಎಲ್ಲ ಟೆಂಡರ್ಗಳಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ನೀಡುತ್ತಿಲ್ಲ. ನಗರದಲ್ಲಿ ಆರು ಸಾವಿರ ಸುಲಭ್ ಶೌಚಾಲಯಗಳಿವೆ. ಇವುಗಳ ನಿರ್ವಹಣೆ ಹೊತ್ತು ಹೊರ ರಾಜ್ಯದವರು ಲಾಭ ಪಡೆಯುತ್ತಿದ್ದರು. ಮುಂದಿನ ಎರಡು ತಿಂಗಳಲ್ಲಿ 3,000 ಶೌಚಾಲಯಗಳನ್ನು ಸಫಾಯಿ ಕರ್ಮಾಚಾರಿಗಳೇ ನಿರ್ವಹಣೆ ಮಾಡಬೇಕು ಎಂದು ಪಾಲಿಕೆಗೆ ಸೂಚಿಸಲಾಗಿದೆ ಎಂದರು.
ನಗರದಲ್ಲಿ ಸಫಾಯಿ ಕರ್ಮಾಚಾರಿ, ಚಿಂದಿ ಆಯುವವರಿಗೆ ಒಣಕಸ ಸಂಗ್ರಹಿಸುವ ಕೆಲಸ ನೀಡುವಂತೆ ಮನವಿ ಮಾಡಲಾಗಿದೆ. ಜಲಮಂಡಳಿಯಲ್ಲಿ 262 ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಾಚಾರಿಗಳನ್ನು 20 ದಿನದೊಳಗೆ ಕಾಯಂ ಮಾಡಬೇಕು ಎಂದು ಜಗದೀಶ್ ಹಿರೇಮನಿ ಆಗ್ರಹಿಸಿದರು.