ಬೆಂಗಳೂರು : ವಕೀಲರಾದ ಜೆ.ಪೂಜಪ್ಪ ಕೆಆರ್‌ಪುರ ಸುತ್ತ-ಮುತ್ತ ಕಳೆದ 10ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದು, ಈ ಬಾರಿ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ ಎಸ್ ಸಂಧು ಅವರನ್ನು ಆಹ್ವಾನಿಸಿ ಉಚಿತ ಪುಸ್ತಕ ವಿತರಣೆ ಮಾಡಿದರು.
ಉಚಿತ ಪುಸ್ತಕ ವಿತರಣೆ ಬಳಿಕ ಮಾತನಾಡಿದ ಸಂಧು ಅವರು, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು, ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು ಅಭ್ಯಾಸದಲ್ಲಿ ನಿರತರಾದರೆ ಅಭ್ಯಾಸ ಕಠಿಣ ಎನಿಸುವುದಿಲ್ಲ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿಯಲ್ಲಿನ ಸವಲತ್ತುಗಳನ್ನು ಪಡೆದು ನಾಡಿಗೆ ಗೌರವ ತರಬೇಕು. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲೀಷ್ ಕಠಿಣ ಅನಿಸಬಹುದು. ಆದರೆ, ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಪಡೆದರೆ ಭಾರತದಲ್ಲಿ ಅಷ್ಟೇ ಅಲ್ಲ ಹೊರದೇಶಗಳಲ್ಲೂ ಕೆಲಸ ಮಾಡಲು ಅನುಕೂಲವಾಗಬಹುದು ಎಂದರು.
ಕಿತ್ತಗನೂರಿನ ಮುಖಂಡ ಹಾಗೂ ವಕೀಲರಾದ ಜೆ.ಪೂಜಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಬಡವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದೇವೆ. ಕಿತ್ತಗನೂರಿನ ಸುತ್ತಮುತ್ತಲಿನ ಸರ್ಕಾರಿ ಸ್ವಾಮ್ಯದ, ಅನುದಾನಿತ ಶಾಲೆಗಳ ಬಡಮಕ್ಕಳನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ವಿತರಿಸಿದ್ದೇವೆ. ಬಡ ಕೂಲಿ ಕಾರ್ಮಿಕರ ಮಕ್ಕಳು ಬಡತನದ ಕಾರಣದಿಂದ ನೋಟ್ ಪುಸ್ತಕ ಕೊಳ್ಳದೆ ಇರಬಹುದು, ಇಂತವರಿಗೆ ನಾವು ಸೌಲಭ್ಯ ಕಲ್ಪಿಸಿರುವುದು ಅನುಕೂಲವಾಗುತ್ತದೆ ಎಂದರು.