ಬೆಂಗಳೂರು: ಚುನಾವಣೆ ಬಗ್ಗೆ ಮತದಾರರಿಗೆ ಸಮಗ್ರ ಮಾಹಿತಿ ಹಾಗು ನೆರವು ನೀಡುವ ಉದ್ದೇಶದಿಂದ ದೇಶದಲ್ಲಿ 'ಚುನಾವಣಾ ಆ್ಯಪ್' ಎನ್ನುವ ಮೊದಲ ಮೊಬೈಲ್ ಆ್ಯಪ್ ಅನ್ನು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿಯೇ ಅಭಿವೃದ್ಧಿಪಡಿಸಿರುವ ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆಯನ್ನೊಳಗೊಂಡ 'ಚುನಾವಣಾ ಆ್ಯಪ್' ಅನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ವಾರ್ತಾ ಸೌಧದಲ್ಲಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಸಂಜೀವ್ ಕುಮಾರ್,ಈ 'ಚುನಾವಣಾ ಆ್ಯಪ್' ರಾಜ್ಯ ಚುನಾವಣಾ ಮಾಹಿತಿ ವ್ಯವಸ್ಥೆಯನ್ನೊಳಗೊಂಡ ಭೌಗೋಳಿಕ, ಪ್ರಾದೇಶಿಕ ಸ್ಮಾರ್ಟ್ ಸಲೂಶನ್ ಆಗಿದ್ದು, ಈ ಯೋಜನೆಯ ಭಾಗವಾಗಿ ರಾಜ್ಯದ ಎಲ್ಲಾ58,186ಮತಗಟ್ಟೆಗಳು ಹೈ ರೆಸಲ್ಯೂಶನ್ ಉಪಗ್ರಹ ಮಾಹಿತಿಗಳನ್ನು ಮತ್ತು ಗ್ರೌಂಡ್ ಸರ್ವೆ ಪ್ರಕ್ರಿಯೆಗಳನ್ನು ಹೊಂದಿದೆ. ಪ್ರತಿ ಮತಗಟ್ಟೆಯ ಗಡಿಯನ್ನು ಹೈ ರೆಸಲ್ಯೂಶನ್ ಉಪಗ್ರಹ ಮಾಹಿತಿ ಮತ್ತು ಆಡಳಿತಾತ್ಮಕ ಗಡಿಯ ರೇಖೆಗಳನ್ನು ಚುನಾವಣಾಧಿಕಾರಿಗಳು ಗುರುತಿಸುತ್ತಾರೆ. ಅದಕ್ಕಾಗಿ ಒಂದು ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ.ಇದರಿಂದ ಪ್ರತಿಯೊಂದು ಕಟ್ಟಡಗಳು, ಮತಗಟ್ಟೆಗಳು,ಮತಗಟ್ಟೆ ಬೂತ್ಗಳು ಮತ್ತು ಇತರೆ ಮೌಲಸೌಕರ್ಯಗಳ ಛಾಯಾಚಿತ್ರಗಳನ್ನು ತೆಗೆಯಬಹುದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ನಾವು ಇದನ್ನು ಬಳಕೆ ಮಾಡಿದ್ದು, 2 ಲಕ್ಷಕ್ಕೂ ಅಧಿಕ ನಾಗರಿಕರು ಬಳಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತಗಟ್ಟೆಯಲ್ಲಿ ಕ್ಯೂ ಎಷ್ಟಿದೆ, ಎಷ್ಟು ಮತದಾನವಾಗಿದೆ. ನಮ್ಮ ಮತಗಟ್ಟೆ ಎಲ್ಲಿದೆ? ಎನ್ನುವ ಸಮಗ್ರ ಮಾಹಿತಿ ಇದೀಗ ಬೆರಳ ತುದಿಯಲ್ಲೇ ಲಭ್ಯ. ಮನೆಯಲ್ಲಿಯೇ ಕುಳಿತು ಇಷ್ಟೇಲ್ಲಾ ಮಾಹಿತಿ ಪಡೆಯುವ ಅವಕಾಶ ಕೇವಲ ಕರ್ನಾಟಕ ಮತದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಅದು ನಮ್ಮ ರಾಜ್ಯದಲ್ಲಿ ಈ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಮತದಾರರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚುನಾವಣಾ ಆ್ಯಪ್ನಲ್ಲಿರುವ ಅಂಶಗಳೇನು?
ಮತದಾರರು ತಮ್ಮ ಎಪಿಕ್ ನಂಬರ್ ನಮೂದಿಸಿದರೆ ಮತಗಟ್ಟೆ ಯಾವುದು? ಎಷ್ಟು ದೂರದಲ್ಲಿದೆ ಎನ್ನುವ ಮಾಹಿತಿ ನೀಡಲಿದೆ.
ಹಿರಿಯ ನಾಗರಿಕ ಮತದಾರರಿಗೆ ಸಾರಿಗೆ ವ್ಯವಸ್ಥೆ ಮತ್ತು ಗಾಲಿ ಕುರ್ಚಿಗಳನ್ನು ಕಾಯ್ದಿರಿಸುವ ಅವಕಾಶ.
ನಗರ ಪ್ರದೇಶಗಳಲ್ಲಿ ಮತಗಟ್ಟೆಯಲ್ಲಿ ಸರತಿ ಸಾಲು ಎಷ್ಟಿದೆ ಎನ್ನುವ ಮಾಹಿತಿ ಲಭ್ಯ.
2 ಗಂಟೆಗೊಮ್ಮೆ ಮತದಾನದ ವಿವರ ಅಪ್ಡೇಟ್.
ಪ್ರತಿ ಸುತ್ತಿನ ಮತ ಎಣಿಕೆ ನೇರವಾಗಿ ಪ್ರಕಟ.
ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿಗಳ ಸಂಪೂರ್ಣ ವಿವರ ಲಭ್ಯ.