ಬೆಂಗಳೂರು: ಬಿಬಿಎಂಪಿ ಹಾಗೂ ಜಲ ಮಂಡಲಿಯವರು ದುರಸ್ತಿ ಕಾರ್ಯ ನಡೆಸಿ ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿ ಕೆ.ಆರ್. ಪುರದ ಕಲ್ಕೆರೆ ಗ್ರಾಮಸ್ಥರು ರಸ್ತೆಗಳಿಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹೊರಮಾವು, ಕಲ್ಕೆರೆ, ಚೆನ್ನಸಂದ್ರ ಗ್ರಾಮಗಳ ಮೇಲೆ ಹಾದು ಹೋಗುವ ರಸ್ತೆಯಲ್ಲಿ ಜಲ ಮಂಡಳಿ ಅಧಿಕಾರಿಗಳು ವರ್ಷದ ಹಿಂದೆ ಕಾವೇರಿ ಪೈಪ್ಲೈನ್ಗಾಗಿ ರಸ್ತೆಯನ್ನು ಅಗೆದವರು ಮತ್ತೆ ಅದಕ್ಕೆ ಡಾಂಬರಿನ ಭಾಗ್ಯ ಕಲ್ಪಿಸದೆ ಹಾಗೆಯೇ ಬಿಟ್ಟಿದ್ಧಾರೆ. ಇನ್ನು ನಗರಕ್ಕೆ ಬರುವವರು ಇದೇ ರಸ್ತೆಯನ್ನು ಅವಲಂಬಿಸಿದ್ದು, ದುರಸ್ತಿ ಕಾರ್ಯ ನಡೆಯದೆ ರಸ್ತೆ ಹದಗೆಟ್ಟು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಮಳೆಗಾಲದಲ್ಲಿ ಪೈಪ್ ಲೈನ್ ಮಾಡಿರುವ ಜಾಗದಲ್ಲಿ ಮಣ್ಣು ಕುಸಿದು ದೊಡ್ಡ ಗಾತ್ರದ ವಾಹನಗಳ ಚಕ್ರಗಳು ಹಳ್ಳಗಳಿಗೆ ಸಿಲುಕಿ, ಟ್ರಾಫಿಕ್ ಜಾಮ್ ಕೂಡ ಆಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನು ರಸ್ತೆ ಬದಿಯಲ್ಲಿರುವ ವ್ಯಾಪಾರಸ್ಥರಿಗೆ ಈ ರಸ್ತೆಯಿಂದ ಬರುವ ಧೂಳಿನಿಂದ ಜನರು ಅಂಗಡಿಗಳಿಗೆ ಬರದೆ ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ಜಲ ಮಂಡಳಿ ಒಂದು ಮಾಡಲು ಹೋಗಿ ಇನ್ನೊಂದು ಸಮಸ್ಯೆ ತಂದೊಡ್ಡಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.