ಬೆಂಗಳೂರು: ಕೊಲೆ ಸೇರಿದಂತೆ ವಿವಿಧ ಪ್ರಕರಣಗಳ ಆರೋಪಿಯಾಗಿದ್ದ ಕುಖ್ಯಾತ ರೌಡಿ ಲಗ್ಗೆರೆ ಸೀನನ ಮೇಲೆ ಮಲ್ಲೇಶ್ವರಂ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ.
ಶ್ರೀನಿವಾಸ್ ಅಲಿಯಾಸ್ ಲಗ್ಗೆರೆ ಸೀನ ಪೀಣ್ಯಾ ಠಾಣಾ ವ್ಯಾಪ್ತಿಯ ತಿಪ್ಪೇನಹಳ್ಳಿ ಬಳಿ ಇರುವುದನ್ನು ಖಚಿತಪಡಿಸಿಕೊಂಡ ಮಲ್ಲೇಶ್ವರಂ ಠಾಣಾ ಪೊಲೀಸರು, ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದ ತಂಡದೊಂದಿಗೆ ಆರೋಪಿಯ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಹೆಡ್ ಕಾನ್ಸ್ಟೇಬಲ್ ಸುನಿಲ್ ಕುಮಾರ್ ಮೇಲೆ ಆರೋಪಿ ಸೀನ ಹಲ್ಲೆ ನಡೆಸಿದ್ದ. ಈ ವೇಳೆ ಮಲ್ಲೇಶ್ವರಂ ಇನ್ಸ್ಪೆಕ್ಟರ್ ಕೆ.ಆರ್. ಪ್ರಸಾದ್, ಆತ್ಮರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡಿಟ್ಟಿದ್ದಾರೆ.
![Laggere Seena](https://etvbharatimages.akamaized.net/etvbharat/prod-images/kn-bng-05-4-shoutout-7204498_04072019152036_0407f_1562233836_820.jpg)
ಸೀನನ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 3 ಕೊಲೆ, 3 ಕೊಲೆ ಯತ್ನ ಹಾಗೂ ರಾಬರಿ ಸೇರಿದಂತೆ 8ಕ್ಕೂ ಅಧಿಕ ಪ್ರಕರಣಗಳಿವೆ. ಈತ ಕಳೆದ ತಿಂಗಳ 17ರಂದು ರಾತ್ರಿ ವೈಯ್ಯಾಲಿ ಕಾವಲ್ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಗಣೇಶ್ ಎಂಬ ಎಲೆಕ್ಟ್ರಿಶಿಯನ್ ಮೇಲೆ ತನ್ನ ಇಬ್ಬರು ಸಹಚರರ ಜೊತೆ ಸೇರಿ ಲಾಂಗ್ ಬೀಸಿದ್ದ. ಮಾತ್ರವಲ್ಲ ಕಾಂಡಿಮೆಂಟ್ ಮಾಲೀಕ ಶ್ರೀನಿವಾಸ್ ಎಂಬವವರ ಮೇಲೂ ಹಲ್ಲೆ ಮಾಡಿದ್ದ. ಇದರಿಂದಾಗಿ ಗಾಯಗೊಂಡಿದ್ದ ಗಣೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಶ್ರೀನಿವಾಸ್ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸೀನನ ಹಿಂದೆ ಬಿದ್ದಿದ್ದರು. ಕೊನೆಗೆ ಇಂದು ಕಾರ್ಯಾಚರಣೆ ನಡೆಸಿ, ಆರೋಪಿ ಸೀನನ ಕಾಲಿಗೆ ಶೂಟ್ ಮಾಡಿದ್ದಾರೆ.
ಭವಿಷ್ಯದಲ್ಲಿ ಬೆಂಗಳೂರಿಗೆ ಮಾರಕವಾಗಬಹುದಾದ ರೌಡಿಗಳಿಗೆ ಈಗಾಗಲೇ ಬಿಸಿ ಮುಟ್ಟಿಸುತ್ತಿರುವ ಪೊಲೀಸರು, ಬುದ್ಧಿ ಕಲಿಯದವರಿಗೆ ಗನ್ ಮೂಲಕವೇ ಉತ್ತರಿಸುತ್ತಿದ್ದಾರೆ.
ಸದ್ಯ ಆರೋಪಿ ಲಗ್ಗೆರೆ ಸೀನ ಹಾಗೂ ಗಾಯಾಳು ಹೆಡ್ ಕಾನ್ಸ್ಟೇಬಲ್ ಸುನಿಲ್ ಕುಮಾರ್ಗೆ ಜಾಲಹಳ್ಳಿಯ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.