ಬೆಂಗಳೂರು: ಸಿದ್ದರಾಮಯ್ಯ ಒಂಥರಾ ಆನೆ ಇದ್ದ ಹಾಗೆ. ಆನೆ, ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳು ಬೊಗಳುವುದು ಸಹಜ ಎಂದು ಶಾಸಕ ಎಸ್ ಟಿ ಸೋಮಶೇಖರ್ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಆನೆ ತರಹ ಹೊಗಳಿಕೆಗೆ ಹಿಗ್ಗೋದೂ ಇಲ್ಲ, ಯಾರೋ ಬಯ್ದರೆ ಕುಗ್ಗೋದೂ ಇಲ್ಲ. ರಾಜ್ಯದಲ್ಲಿ ಮೈತ್ರಿ ಬೇಡ ಎನ್ನಲು ಕುಪೇಂದ್ರ ರೆಡ್ಡಿ ಯಾರು? ಅವರು ಎಂಪಿ ಇರಬಹುದು. ಆದರೆ ಅವರೇನು ಸಮ್ಮಿಶ್ರ ಸರ್ಕಾರ ಮಾಡಿದ್ದಾರಾ? ರಾಹುಲ್ ಗಾಂಧಿ, ದೇವೇಗೌಡರು ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ವಿರುದ್ಧ ಸೋಮಶೇಖರ್ ಕಿಡಿಕಾರಿದರು.
ದೇವೇಗೌಡರು ಮಾತನಾಡೋದನ್ನೆಲ್ಲ ಕುಪೇಂದ್ರ ರೆಡ್ಡಿ ಮಾತನಾಡ್ತಾರೆ ಅಂತ ಕುಪೇಂದ್ರ ರೆಡ್ಡಿಗೆ ಜಿಪಿಎ ಕೊಟ್ಟಿದ್ದಾರಾ? ನಮ್ಮನ್ನು ಚಮಚಾಗಳು ಅನ್ನೋ ವಿಶ್ವನಾಥ್ ಮಟ್ಟದಲ್ಲಿ ನಾವಿಲ್ಲ. ಅವರು ಜೆಡಿಎಸ್ನ ರಾಜ್ಯಾಧ್ಯಕ್ಷರು, ನಾವು ಸಣ್ಣಪುಟ್ಟ ಕ್ಷೇತ್ರಗಳ ಶಾಸಕರು ಎಂದರು.
ಕಾಂಗ್ರೆಸ್ ಸಮಾನ ಮನಸ್ಕ ಶಾಸಕರ ಸಭೆ ವಿಚಾರ ಮಾತನಾಡಿದ ಸೋಮಶೇಖರ್, ಮೇ 21 ರಂದು ಸಭೆ ಕರೆಯುವ ಚಿಂತನೆಯಿದೆ, ಆದರೆ ಇನ್ನು ಯಾರ ಬಳಿಯೂ ಮಾತನಾಡಿಲ್ಲ. ಈಗ ಬೈ ಎಲೆಕ್ಷನ್ನಲ್ಲಿ ನಾವು ತೊಡಗಿಸಿಕೊಳ್ಳಬೇಕಿದೆ. ಕುಂದಗೋಳ, ಚಿಂಚೋಳಿ ಎಲೆಕ್ಷನ್ನಲ್ಲಿ ಬ್ಯುಸಿಯಾಗಿದ್ದೇವೆ, 10-12 ಶಾಸಕರ ಜೊತೆ ಚರ್ಚಿಸಿ ಸಭೆ ನಡೆಸುತ್ತೇವೆ. 17 ರ ನಂತರ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.